ಸಹಾಯದ ನೆಪದಲ್ಲಿ ಪೇದೆಯಿಂದ ಅತ್ಯಾಚಾರ, ವಂಚನೆ

Published on

ಚನ್ನಪಟ್ಟಣ: ರಾಷ್ಟ್ರೀಯ ತುರ್ತು ಸಹಾಯವಾಣಿ ಸಂಖ್ಯೆ 112 ದೇಶದ ಮಹಿಳೆಯರಿಗೆ 24 ಗಂಟೆಯೂ ಭದ್ರತೆ ಒದಗಿಸಲು ಪ್ರಮುಖ ಪಾತ್ರವಹಿಸುತ್ತಿದೆ ಎಂದು ನಂಬಲಾಗಿದೆ. ಆದರೆ, ತಾಲೂಕಿನ 112ರ ಸಿಬ್ಬಂದಿಯೊಬ್ಬ ರಣೆಯ ನೆಪದಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿ, ಆರ್ಥಿಕವಾಗಿಯೂ ವಂಚಿಸಿದ್ದಾನೆ ಎನ್ನಲಾಗಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

112 ವಾಹನದ ಚಾಲಕ ಡಿಎಆರ್​ ಪೇದೆ ಪುಟ್ಟಸ್ವಾಮಿ ಆರೋಪಿ. ಬೆಂಗಳೂರು &ಮೈಸೂರು ಹೆದ್ದಾರಿಯ ಪಕ್ಕದಲ್ಲಿರುವ ಗ್ರಾಮದ ಮಹಿಳೆಯೊಬ್ಬರು ಈ ವಿಚಾರವಾಗಿ ತಾಲೂಕಿನ ಎಂಕೆ ದೊಡ್ಡಿ ಪೊಲೀಸ್​ ಠಾಣೆಯಲ್ಲಿ ಅತ್ಯಾಚಾರ, ವಂಚನೆ ಹಾಗೂ ಜಾತಿನಿಂದನೆ ದೂರು ಸಲ್ಲಿಸಿದ್ದಾರೆ. ಪ್ರಕರಣದ ತನಿಖೆ ಡಿಸಿಆರ್​ಇ ಪೊಲೀಸ್​ ಠಾಣೆಗೆ ವರ್ಗಾವಣೆಯಾಗಿದ್ದು, ಟನೆಗೆ ಸಂಬಂಧಿಸಿದಂತೆ ಪೇದೆಯನ್ನು ಎಸ್​ಪಿ ಶ್ರೀನಿವಾಸ್​ ಗೌಡ ಅಮಾನತು ಮಾಡಿದ್ದಾರೆ. ಸದ್ಯ ಪೇದೆ ತಲೆಮರೆಸಿಕೊಂಡಿದ್ದಾನೆ.

ಏನಿದು ಆರೋಪ?: ಮಹಿಳೆಯೊಬ್ಬರು ಮನೆಯ ಬಳಿ ನಡೆದ ಗಲಾಟೆಯೊಂದರ ವಿಚಾರವಾಗಿ 112ಕ್ಕೆ ಕರೆ ಮಾಡಿದ್ದಾರೆ. ಕರ್ತವ್ಯದ ಸಲುವಾಗಿ ಸ್ಥಳಕ್ಕೆ ಆಗಮಿಸಿದ ಪೇದೆ ಈ ವೇಳೆ ಮಹಿಳೆಯ ನಂಬರ್​ ಪಡೆದು ಸಹಾಯ ಮಾಡುವ ನೆಪ ಹೇಳಿ ಸಲುಗೆ ಬೆಳೆಸಿಕೊಂಡಿದ್ದಾನೆ. ಈ ನಡುವೆ ಮಹಿಳೆಯನ್ನು ಪುಸಲಾಯಿಸಿ 12 ಲ ರೂ. ಪಡೆದಿರುವುದಲ್ಲದೆ, ನಾಲ್ಕು ಬಾರಿ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಒಡವೆ ಹಾಗೂ ಹಣ ಪಡೆದು ವಂಚಿಸಿದ ಹಿನ್ನೆಲೆಯಲ್ಲಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ನಂತರ ಈ ವಿಚಾರ ತಿಳಿದ ಕುಟುಂಬಸ್ಥರು ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net