ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ

arrest
Published on

ಕಾರ್ಕಳ: ಕಾಲೇಜು ವಿದ್ಯಾರ್ಥಿನಿಯನ್ನು ನಿರಂತರ ಅತ್ಯಾಚಾರ ಎಸಗಿ ಬ್ಲಾೃಕ್‌ಮೇಲ್ ಮಾಡುತ್ತಿದ್ದ ಉಪ್ಪಿನಂಗಡಿಯ ಪ್ರಾಣೇಶ್(38) ಎಂಬುವನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.

2020ರ ಜನವರಿಯಲ್ಲಿ ಈ ಘಟನೆ ನಡೆದಿತ್ತು. ಕಾರ್ಕಳದ ಕಾಲೇಜು ವಿದ್ಯಾರ್ಥಿನಿ ಜಾರ್ಕಳದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವೇಳೆಗೆ ಬಂದ ಆರೋಪಿ ಪ್ರಾಣೇಶ್, ಕಾಲೇಜಿಗೆ ಡ್ರಾಪ್ ಮಾಡುವುದಾಗಿ ನಂಬಿಸಿ ಕಾರಿನಲ್ಲಿ ಕುಳ್ಳಿರಿಸಿ ಅಮಲುಭರಿತ ಜ್ಯೂಸ್ ಕುಡಿಸಿ ಉಪ್ಪಿನಂಗಡಿ ಬಂದಾರಿನ ಮನೆಯೊಂದಕ್ಕೆ ಕರೆದೊಯ್ದಿದ್ದಾನೆ.

ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ ಆರೋಪಿ, ಈ ವಿಷಯ ಯಾರಿಗಾದರೂ ತಿಳಿಸಿದರೆ ಆಕೆಯ ನಗ್ನ ಚಿತ್ರ ಬಹಿರಂಗಪಡಿಸುವುದಾಗಿ ಬ್ಲಾಕ್‌ಮೇಲ್ ಮಾಡಿದ್ದಾನೆ. ಮಾನಕ್ಕೆ ಅಂಜಿದ ಯುವತಿ ಆತನ ಕೃತ್ಯವನ್ನು ಇತರರಿಗೆ ತಿಳಿಸದೆ ಮೌನಕ್ಕೆ ಶರಣಾಗಿದ್ದಳು. ಅದನ್ನೇ ಬಂಡವಾಳವನ್ನಾಗಿ ಮಾಡಿದ ಆರೋಪಿ ಆಗಾಗ ಕರೆ ಮಾಡಿ, ಬರದಿದ್ದಲ್ಲಿ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಕೆಯೊಡ್ಡುತ್ತಿದ್ದ.

ಜ.12ರಂದು ವಿದ್ಯಾರ್ಥಿನಿ ಕಾರ್ಕಳದ ಕಂಪ್ಯೂಟರ್ ಕ್ಲಾಸಿಗೆ ಬಂದು ಹೋಗುತ್ತಿದ್ದ ಸಂದರ್ಭದಲ್ಲಿ ಬೈಲೂರಿಗೆ ಬರುವಂತೆ ಆರೋಪಿ ಬೆದರಿಕೆ ಹಾಕಿದ್ದಾನೆ. ಅದಕ್ಕೆ ಅಂಜಿದ ಆಕೆ ಬೈಲೂರಿಗೆ ಹೋದಾಗ ಆಕೆಯನ್ನು ಬೈಕ್‌ನಲ್ಲಿ ಕುಳ್ಳಿರಿಸಿ ಗುಡ್ಡೆಯಂಗಡಿ ಬಳಿ ಆತ ಕೆಲಸ ಮಾಡುತ್ತಿದ್ದ ಮಾಲೀಕರ ಮನೆಗೆ ಕರೆದೊಯ್ದು ಅಲ್ಲಿ ಅತ್ಯಾಚಾರ ನಡೆಸಿದ್ದಾನೆ ಎಂದು ಸಂತ್ರಸ್ತೆ ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾಳೆ. ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಆರೋಪಿ ಪ್ರಾಣೇಶ್ ಹಿರಿಯಡ್ಕದ ಮಹಿಳೆಯೊಂದಿಗೆ ಮದುವೆಯಾಗಿದ್ದು, ಸಂತ್ರಸ್ತೆ ಯುವತಿ ದೂರದ ಸಂಬಂಧಿಯಾಗಿದ್ದಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net