

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು 20 ದಿನಗಳ ಕಾಲ ಲಾಡ್ಜ್‌ನಲ್ಲಿರಿಸಿ ನಿರಂತರ ಅತ್ಯಾಚಾರ ನಡೆಸಿದ ಆರೋಪಿಯನ್ನು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಡಬ ಮೂಲದ ಅನೀಶ್ ರೆಹಮಾನ್(29) ಬಂಧಿತ ಆರೋಪಿ.
ಪ್ರಕರಣದ ವಿವರ: ಇನ್‌ಸ್ಟ್ರ ಗ್ರಾಂ ಮೂಲಕ ಬಂಟ್ವಾಳದ ಯುವತಿಯ ಪರಿಚಯವಾಗಿತ್ತು. ಬಳಿಕ ಪ್ರೀತಿಸುವ ನಾಟಕವಾಡಿದ್ದ. ಅಲ್ಲದೆ, ಮದುವೆಯಾಗುವುದಾಗಿ ನಂಬಿಸಿ ನಿರಂತರ ದೈಹಿಕ ಸಂಪರ್ಕ ನಡೆಸಿದ್ದ. ಮೇ 28ರಿಂದ ಮಂಗಳೂರಿನ ಪೂಂಜಾ ಇಂಟರ್ನ್ಯಾಷನಲ್ ಹೊಟೇಲ್ ನಲ್ಲಿ ರೂಂ ಮಾಡಿದ್ದು 20 ದಿನಗಳ ಕಾಲ ಅತ್ಯಾಚಾರ ನಡೆಸಿದ್ದಾಗಿ ಯುವತಿ ದೂರು ನೀಡಿದ್ದಾಳೆ.
24 ವರ್ಷದ ಯುವತಿಯೂ ಮುಸ್ಲಿಂ ಆಗಿದ್ದು ಬಂಟ್ವಾಳದಿಂದ ಮಂಗಳೂರಿಗೆ ಶಿಕ್ಷಣ ಪಡೆಯುವುದಕ್ಕಾಗಿ ಬಂದು ಹೋಗುತ್ತಿದ್ದಳು. ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸುತ್ತಿದ್ದಳು. ಈ ವೇಳೆ, ಯುವಕನ ಪರಿಚಯ ಆಗಿದ್ದು ಮದುವೆಯಾಗುವ ನಂಬಿಕೆಯಲ್ಲಿ ಸುತ್ತಾಟ ನಡೆಸಿದ್ದಳು. ಅನೀಶ್ ರೆಹಮಾನ್ ಬೇರೆ ಬೇರೆ ಕಡೆ ಹೊಟೇಲ್ ರೂಮ್ ಮಾಡಿ ಬಿಲ್ ಕೊಡದೆ ಪರಾರಿಯಾಗುವ ಚಟ ಹೊಂದಿದ್ದ. ಪೂಂಜಾ ಹೊಟೇಲ್ ನಲ್ಲಿಯೂ ಅದೇ ರೀತಿ ಮಾಡಿದ್ದು ಸಿಬಂದಿ ಹಿಡಿದು ಹಾಕಿದ್ದರು. ಬಳಿಕ ಯುವತಿ ಬಳಿಯಿದ್ದ ಲ್ಯಾಪ್‌ಟಾಪ್ ಅನ್ನು ಹೊಟೇಲಿನಲ್ಲಿ ಅಡವಿಟ್ಟು ಹೊರಬಂದಿದ್ದ. 3 ಲ್ಯಾಪ್‌ಟಾಪ್ ಕಾಣದಾಗಿದ್ದರಿಂದ ಯುವತಿ ಬಳಿ ಮನೆಯವರು ಪ್ರಶ್ನೆ ಮಾಡಿದ್ದರು. ಆನಂತರ, ಮನೆಯವರಿಗೆ ಇವರ ವಿಷಯ ತಿಳಿದು ಅನೀಶ್ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ, ಆತನಿಗೆ ಮದುವೆಯಾಗಿರುವ ವಿಷಯ ತಿಳಿದು ಬಂದಿತ್ತು. ಬಳಿಕ ಮಹಿಳಾ ಠಾಣೆಗೆ ದೂರು ನೀಡಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅನೀಶ್ ಈ ಹಿಂದೆ ಗಾಂಜಾ ಸೇವನೆ ಪ್ರಕರಣದಲ್ಲಿ ಬಂಧಿತನಾಗಿದ್ದು ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.