ಮನೆಗೆ ನುಗ್ಗಿ ಮನೆಮಂದಿಯ ಎದುರೇ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗಳಿಬ್ಬರ ಬಂಧನ

upp crime
Published on

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದಲ್ಲಿ ರಾತ್ರಿ ವೇಳೆ ಮನೆಗೆ ನುಗ್ಗಿ ಮನೆಮಂದಿಯ ಸಮ್ಮುಖದಲ್ಲೇ 13ರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕರಿಬ್ಬರನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಕಡಬ ತಾಲೂಕಿನ ಕೊಯಿಲ ಗ್ರಾಮದ ಹಸೈನಾರ್(24) ಹಾಗೂ ಅಬ್ಬಾಸ್(30) ಆರೋಪಿಗಳು. ಇವರು ಮೂರು ದಿನಗಳಿಂದ ಕರಾಯ ಗ್ರಾಮದಲ್ಲಿ ಮರ ಕತ್ತರಿಸುವ ಕೆಲಸ ನಿರ್ವಹಿಸುತ್ತಿದ್ದು, ನೀರು ಕೇಳುವ ನೆಪದಲ್ಲಿ ಬಾಲಕಿಯ ಮನೆಗೆ ತೆರಳಿದ್ದರು. ಈ ಸಂದರ್ಭ ಮನೆಯಲ್ಲಿರುವವರ ಬಗ್ಗೆ ಗಮನಿಸಿದ ಆರೋಪಿ ಹಸೈನಾರ್ ಶುಕ್ರವಾರ ಸಾಯಂಕಾಲ ಬಾಲಕಿಯ ಮನೆಗೆ ಬಂದು ಮರ ತುಂಡರಿಸುವ ಚೈನ್ ಇಲ್ಲಿ ಬಾಕಿಯಾಗಿದೆ ಎಂದು ಹೇಳಿ ಬಾಲಕಿಯ ಕೈಗೆ ಚೀಟಿಯೊಂದನ್ನು ನೀಡಿದ್ದನು. ಅಲ್ಲದೆ ‘ಈ ನಂಬರ್‌ಗೆ ಫೋನ್ ಮಾಡು, ಇಲ್ಲದಿದ್ದರೆ ನಿನ್ನನ್ನು ಬಿಡುವುದಿಲ್ಲ’ ಎಂದು ಬೆದರಿಕೆಯೊಡ್ಡಿ ಹೋಗಿದ್ದ. ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಬೈಕ್‌ನಲ್ಲಿ ತನ್ನ ಸಹಚರ ಅಬ್ಬಾಸ್ ಎಂಬಾತನೊಂದಿಗೆ ಬಂದ ಹಸೈನಾರ್ ಮನೆ ಒಳಗೆ ಪ್ರವೇಶಿಸಿ, ಬಾಲಕಿಯನ್ನು ಬಲವಂತವಾಗಿ ಮನೆಯೊಳಗಿನ ರೂಮಿಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ವೇಳೆ ಬಾಲಕಿ ಹಾಗೂ ಬಾಲಕಿಯ ತಾಯಿ ರಕ್ಷಣೆಗಾಗಿ ಬೊಬ್ಬೆ ಹೊಡೆದಾಗ ನೆರೆ ಮನೆಯವರು ಓಡಿ ಬಂದು ಬಾಲಕಿಯನ್ನು ಕಾಮುಕರ ಹಿಡಿತದಿಂದ ಬಿಡಿಸಿ ರಕ್ಷಿಸಿದ್ದಾರೆ.

ಬಳಿಕ ಸ್ಥಳೀಯರ ಸಹಕಾರದಿಂದ ಆರೋಪಿಗಳನ್ನು ಹಿಡಿದು ಉಪ್ಪಿನಂಗಡಿ ಪೊಲೀಸರಿಗೊಪ್ಪಿಸಲಾಯಿತು. ಪೊಲೀಸರು ಆರೋಪಿಗಳನ್ನು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net