

ಹುಬ್ಬಳ್ಳಿ: ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಹಳೇಹುಬ್ಬಳ್ಳಿ ಪೊಲೀಸರು ಮಧ್ಯಪ್ರದೇಶದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಮಧ್ಯಪ್ರದೇಶದ ಖಂಡ್ವಾ ಪಟ್ಟಣದಲ್ಲಿ ಧಾರ್ಮಿಕ ಶಾಲೆಯೊಂದನ್ನು ನಡೆಸುತ್ತಿರುವ ಗುಲಾಮ್ ಜಿಲಾನಿ ಅಜಹರಿ ಬಂಧಿತ ವ್ಯಕ್ತಿ. ಪ್ರಮುಖ ಆರೋಪಿಯಾಗಿದ್ದ ಈತನನ್ನು ಸ್ಥಳೀಯ ಪೊಲೀಸರು ಅಲ್ಲಿಂದ ಬಂಧಿಸಿ ಕರೆ ತಂದಿದ್ದಾರೆ.
2021ರ ಆಗಸ್ಟ್ 17ರಿಂದ 2023ರ ಡಿಸೆಂಬರ್ 10ರವರೆಗೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಗರ್ಭಿಣಿಯಾದಾಗ ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದಾನೆ ಎಂದು ಮಹಿಳೆ ಈತನ ವಿರುದ್ಧ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಿದ್ದರು.
ಆರೋಪಿ ಹುಬ್ಬಳ್ಳಿಗೆ ಬಂದಾಗ ಮಹಿಳೆಯ ತಂದೆಗೆ ಪರಿಚಿತನಾಗಿದ್ದ. ಈ ಮೂಲಕ ಅವರ ಮಗಳಿಗೂ ಪರಿಚಿತನಾಗಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದ. ಅವಳಿಗೆ ಆಂಗ್ಲ ಭಾಷೆಯಲ್ಲಿ ಹಿಡಿತವಿತ್ತು. ಅಲ್ಲದೇ ಅವಳನ್ನು ಖಂಡ್ವಾ ಪಟ್ಟಣಕ್ಕೆ ಕರೆದುಕೊಂಡು ಹೋಗಿದ್ದ. ಅವನಿಂದ ಲೈಂಗಿಕ ದೌರ್ಜನ್ಯ ಹಾಗೂ ಅವರ ಕುಟುಂಬದ ಎಂಟು ಮಂದಿ ಸದಸ್ಯರಿಂದ ಮಾನಸಿಕ ದೌರ್ಜನ್ಯ ಎದುರಿಸಿದ್ದೇನೆ ಎಂದು ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಎಂ. ರಾಜೀವ್ ತಿಳಿಸಿದ್ದಾರೆ.