68.50 ಲಕ್ಷ ರೂ ವೆಚ್ಚದಲ್ಲಿ ಮಂಡ್ಯದ ರೈತ ಸಭಾಂಗಣ ನವೀಕರಣ: ಆರ್‌ಎಪಿಸಿಎಂಎಸ್ ಅಧ್ಯಕ್ಷ ಯು.ಸಿ.ಶೇಖರ್ ಹೇಳಿಕೆ

RAPCMS Management Board Press Meet
Published on

ಮಂಡ್ಯ: ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ರೈತ ಸಭಾಂಗಣದ ನವೀಕರಣಕ್ಕೆ 68.50 ಲಕ್ಷ ರೂ ಅಂದಾಜು ಪಟ್ಟಿ ತಯಾರಿಸಿದೆ. ಇದಕ್ಕೆ ಸಂಘ 17 ಲಕ್ಷ ರೂ ವ್ಯಯಿಸಲಿದೆ. ಅಂತೆಯೇ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಡಳಿತ ಸಹಕಾರದಿಂದ ನವೀಕರಣ ಕಾರ್ಯ ಪೂರೈಸಲಾಗುವುದು ಎಂದು ರೈತ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ(ಆರ್‌ಎಪಿಸಿಎಂಎಸ್) ಅಧ್ಯಕ್ಷ ಯು.ಸಿ.ಶೇಖರ್ ಭರವಸೆ ವ್ಯಕ್ತಪಡಿಸಿದರು.

ಮರಕಾಡನದೊಡ್ಡಿ ಬಳಿ ಇರುವ ಸಂಸ್ಥೆಯ ಬೃಹತ್ ಗೋದಾಮಿನಲ್ಲಿ ರೈತ ಸ್ನೇಹಿ ಯೋಜನೆಗಳಾದ ಬೆಲ್ಲ, ಟಮೋಟೋ ಹಾಗೂ ಎಳನೀರು ಮೌಲ್ಯವರ್ಧನೆ ಉದ್ದೇಶದಿಂದ 20 ಕೋಟಿ ರೂ ಯೋಜನೆ ಜಾರಿಗೊಳಿಸಲಾಗುತ್ತಿದೆ. ಪ್ರಸಕ್ತ ವರ್ಷ ಸಂಘ 19,97,448 ರೂ ನಿವ್ವಳ ಲಾಭ ಗಳಿಸಿದ್ದು, ಪ್ರತಿವರ್ಷ 37.46 ಕೋಟಿ ರೂ ವಹಿವಾಟು ನಡೆಸುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಜಿಲ್ಲೆಯ ಹಿರಿಯ ಸಹಕಾರಿ ಧುರೀಣರಾಗಿದ್ದ ಕೆ.ವಿ.ಶಂಕರಗೌಡ ಮತ್ತು ಜಿ.ಎಸ್.ಬೊಮ್ಮೇಗೌಡ ಮತ್ತವರ ಒಡನಾಡಿಗಳ ದೂರದೃಷ್ಠಿಯಿಂದ 75 ವರ್ಷದ ಹಿಂದೆ ಆರಂಭಗೊಂಡ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಅಂತೆಯೇ ಸೆ.23ರಂದು ಬೆಳಗ್ಗೆ 11.30ಕ್ಕೆ ಸಂಘದ ಕಚೇರಿ ಆವರಣದಲ್ಲಿ ಸರ್ವ ಸದಸ್ಯರ ಸಭೆ ಆಯೋಜಿಸಲಾಗಿದೆ. ಸಂಘದಲ್ಲಿ 7,738 ಸರ್ವ ಸದಸ್ಯರಿದ್ದು, ಈ ಪೈಕಿ 6,615 ಅರ್ಹ ಸದಸ್ಯರಿಗೆ ಅಂಚೆ ಮೂಲಕ ಆಹ್ವಾನ ಪತ್ರಿಕೆ ಕಳಿಸಲಾಗಿದೆ. ಅನಿವಾರ್ಯ ಕಾರಣದಿಂದ ಕೆಲವರಿಗೆ ಪತ್ರಿಕೆ ತಲುಪಿಲ್ಲ ಎಂದರು.

ನಿರ್ದೇಶಕರಾದ ಅಂಜನಾ ಶ್ರೀಕಾಂತ್, ಬೇಲೂರು ಸೋಮಶೇಖರ್, ಉದಯ್‌ಕುಮಾರ್, ಎಚ್.ಎಸ್.ಯೋಗೇಶ್, ವ್ಯವಸ್ಥಾಪಕ ಶಂಕರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net