

ಮಂಡ್ಯ: ರೈತರು ಬೆಳೆಯುವ ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ಆರ್‌ಎಪಿಸಿಎಂಎಸ್ ಅಧ್ಯಕ್ಷ ಯು.ಸಿ.ಶೇಖರ್ ಹೇಳಿದರು.
ನಗರದ ಆರ್‌ಎಪಿಸಿಎಂಎಸ್ ಸಂಘದ ಪ್ರಧಾನ ಕಚೇರಿ ಆವರಣದಲ್ಲಿ ಆಯೋಜಿಸಿದ್ದ 53ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ವತಿಯಿಂದ 20 ಕೋಟಿ ರೂ ಅನುದಾನ ತಂದು ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ರೈತರಿಗೆ ತರಬೇತಿ ನೀಡುವುದರ ಜತೆಗೆ ಷೇರುದಾರರನ್ನು ಸೇರಿಸಿ ರೈತ ಉತ್ಪಾದಕ ಕಂಪನಿ ಮಾಡಲು ಆಡಳಿತ ಮಂಡಳಿ ಕ್ರಮ ವಹಿಸಿದೆ ಎಂದು ತಿಳಿಸಿದರು.
ಬೆಳೆಗೆ ಉತ್ತಮ ಬೆಲೆ ಸಿಗಲು ಹಾಗೂ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡಲು ಕ್ರಮ ವಹಿಸಲಾಗುತ್ತಿದೆ. ಮಾತ್ರವಲ್ಲದೆ ಸಂಘದಲ್ಲಿ ಸೌರ ವಿದ್ಯುತ್ ಅಳವಡಿಸುವುದರ ಜತೆಗೆ ರೈತರಿಗೆ ತರಬೇತಿ ಕೊಡುವುದು ಹಾಗೂ ಜಮೀನುಗಳಲ್ಲಿ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಬಸ್ ಹಾಗೂ ರೈಲು ನಿಲ್ದಾಣ ರೈತ ಸಭಾಂಗಣಕ್ಕೆ ಹತ್ತಿರವಿರುವುದರಿಂದ ಸಾರ್ವಜನಿಕರಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಆಡಳಿತ ಮಂಡಳಿ ಮುಂದಾಗಿದೆ. ಈ ನಡುವೆ ಸಂಘದಲ್ಲಿ ವಹಿವಾಟು ಕಡಿಮೆಯಾಗಿದೆ. 24,000 ಕ್ವಿಂಟಾಲ್ ಬರುತ್ತಿದ್ದ ಅಕ್ಕಿ 12,000 ಕ್ವಿಂಟಾಲ್ಗೆ ಇಳಿದಿದೆ. ಸೇವೆ ಮಾಡುವ ಸಂದರ್ಭದಲ್ಲಿ ಲಾಭಾಂಶ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಆರ್‌ಎಪಿಸಿಎಂಎಸ್ ಲಾಭ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಈಗಾಗಲೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕರ ಸಹಕಾರದೊಂದಿಗೆ ರೈತ ಸಭಾಂಗಣವನ್ನು ನವೀಕರಣ ಮಾಡಲು ಯೋಜನೆ ರೂಪಿಸಲಾಗಿದೆ. ಅಭಿವೃದ್ಧಿ ಕೆಲಸಕ್ಕೆ ಷೇರುದಾರರು ಸಹಕಾರ ಕೊಡಬೇಕೆಂದು ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷ ಜೆ.ಪಿ.ಮಹೇಶ್, ನಿರ್ದೇಶಕರಾದ ಬಿ.ಪಿ.ಸೋಮಶೇಖರ್, ಕೆ.ಸಿ.ರವೀಂದ್ರ, ಎನ್.ಪುನೀತ್, ಎಚ್.ಎಸ್. ಯೋಗೇಶ್‌ಕುಮಾರ್, ಎಂ.ಪಿ.ಶ್ರೀಧರ್, ಜಿ.ಎನ್.ಉದಯಕುಮಾರ್, ಸಿ.ಕೆ.ಪಾಪಯ್ಯ, ಕೆ.ಹೇಮಲತಾ, ಜಿ.ಎಸ್.ಅಂಜನಾ, ಕೆ.ಟಿ.ಚಂದ್ರಶೇಖರ್, ಎಚ್.ಅಶೋಕ್, ನಾಗಭೂಷಣ್ ಇತರರಿದ್ದರು.