

ವಿ.ಸುನೀಲ್ ಸೋಮತ್ತನಹಳ್ಳಿ ಚನ್ನರಾಯಪಟ್ಟಣ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ವಿಶ್ವದ ಗಮನ ಸೆಳೆದಿರುವ ದೇವನಹಳ್ಳಿ ತಾಲೂಕಿನಲ್ಲಿ ರಸ್ತೆ ಅದ್ವಾನಗಳು ಖ್ಯಾತಿಗೆ ಕಪ್ಪುಚುಕ್ಕಿ ತರುತ್ತಿವೆ. ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮುಖ್ಯರಸ್ತೆಯಾದ ಚನ್ನರಾಯಪಟ್ಟಣ ಹೋಬಳಿಯ ಬೂದಿಗೆರೆ ಮುಖ್ಯರಸ್ತೆಯಲ್ಲಿ ಮಂಡಿಯುದ್ದದ ಗುಂಡಿಗಳು ನಿರ್ಮಾಣವಾಗಿ ವಾಹನ ಸವಾರರ ಪ್ರಾಣಕ್ಕೆ ಯಮಪಾಶ ಹಾಕಿ ಕಾಯುವಂತೆ ಕಾಣುತ್ತಿವೆ.
ಬೆಂಗಳೂರು ನಗರ ಸೇರಿ ದೇವನಹಳ್ಳಿ, ಚಿಕ್ಕಬಳ್ಳಾಪುರ ಸುತ್ತಮುತ್ತಲಿನ ವ್ಯಾಪ್ತಿಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ಪ್ರಮುಖ ಹೆದ್ದಾರಿಯಾಗಿದ್ದು, ಹೆಜ್ಜೆ ಹೆಜ್ಜೆಗೂ ಮೈದಳೆದಿರುವ ರಸ್ತೆಗುಂಡಿಗಳು ವಾಹನ ಸವಾರರು ತಾಳ್ಮೆ ಪರೀಕ್ಷಿಸುತ್ತಿವೆ. ನಗರದಿಂದ ವಿವಾನ ನಿಲ್ದಾಣಕ್ಕೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿಯೂ ಅಪೂರ್ಣವಾಗಿರುವುದು ಮತ್ತಷ್ಟು ಸಂಕಷ್ಟಕ್ಕೆ ದಾರಿ ಮಾಡಿಕೊಟ್ಟಿದೆ. ಇದರಿಂದಾಗಿ ಈ ರಸ್ತೆ ಅಪಘಾತವಲಯವಾಗಿ ಕುಖ್ಯಾತಿ ಪಡೆದಿದ್ದು ವಾಹನ ಸವಾರರು ಪ್ರಾಣವನ್ನು ಮುಷ್ಟಿಯಲ್ಲಿ ಹಿಡಿದು ಸಾಗಬೇಕಾಗಿದೆ.
ಗ್ರಾಮೀಣ ರಸ್ತೆಗಳ ಬಗ್ಗೆ ಅಸಡ್ಡೆ: ತಾಲೂಕಿನಲ್ಲಿ ಗ್ರಾಮೀಣ ರಸ್ತೆಗಳು ಇಂದಿಗೂ ಸಮಸ್ಯೆಯಾಗಿಯೇ ಉಳಿದಿವೆ. ಸರ್ಕಾರದಿಂದ ಪ್ರತಿ ವರ್ಷ ಅನುದಾನ ಮಂಜೂರಾಗುತ್ತಿದ್ದರೂ, ಹಳ್ಳಿಗಳಲ್ಲಿ ರಸ್ತೆ ಸಮಸ್ಯೆಗೆ ಪರಿಹಾರವೇ ಇಲ್ಲದಾಗಿದೆ. ಇದೀಗ ಅತಿವೃಷ್ಟಿಯಿಂದಾಗಿ ಇನ್ನಷ್ಟು ರಸ್ತೆಗಳು ಹೊಂಡ, ಗುಂಡಿಗಳಿಂದ ತುಂಬಿ ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ಗುಣಮಟ್ಟದ ಮಾತೇ ಇಲ್ಲ ಯಾವುದೇ ಪಕ್ಷ, ವ್ಯಕ್ತಿ ಅಧಿಕಾರದಲ್ಲಿರಲಿ, ರಸ್ತೆ ಅಭಿವೃದ್ಧಿಗಾಗಿಯೇ ಬೇರೆ ಬೇರೆ ದಿಕ್ಕಿನಿಂದ ಅನುದಾನ ತರುವ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಗ್ರಾಮೀಣಾಭಿವೃದ್ಧಿ ಇಲಾಖೆ, ಪಿಡಬ್ಲೂಡಿ, ಪ್ರಧಾನಮಂತ್ರಿ ಗ್ರಾಮ ಸಡಕ್‌ಯೋಜನೆ, ಮುಖ್ಯಮಂತ್ರಿ ಗ್ರಾಮ ಸಡಕ್, ಸಂಸದರ ನಿಧಿ, ಶಾಸಕರ ನಿಧಿ ಹೀಗೆ ಹತ್ತಾರು ಅನುದಾನಗಳಿವೆ, ರಸ್ತೆ ಅಭಿವೃದ್ಧಿಗಾಗಿಯೇ ಕೋಟ್ಯಂತರ ರೂಪಾಯಿ ಹರಿದು ಬರುತ್ತಿದೆ. ಆದರೆ ರಸ್ತೆ ಕಾಮಗಾರಿ ಮುಗಿದ ನಂತರ ಬಿಲ್ ಪಾವತಿಯ ಬಗ್ಗೆ ತರಾತುರಿ ಇರುತ್ತದೆಯೇ ಹೊರತು ರಸ್ತೆಯ ಗುಣಮಟ್ಟವೇನು ಎಂಬ ಬಗ್ಗೆ ಯಾರೊಬ್ಬರೂ ತುಟಿಬಿಚ್ಚುವುದಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ.
ರಸ್ತೆ ತಡೆದು ಪ್ರತಿಭಟನೆಗೆ ಎಚ್ಚರಿಕೆ ದೇಶಿ ಮತ್ತು ವಿದೇಶಿಗರು ಪ್ರಯಾಣಿಸುವ ರಸ್ತೆಯಲ್ಲಿಯೇ ಈ ದುಸ್ಥಿತಿ ಎದುರಾಗಿದ್ದು, ಬೂದಿಗೆರೆ ಸೇರಿ ಸುತ್ತಮುತ್ತಲಿನ ಗ್ರಾಮಸ್ಥರಿಗೂ ದಿನನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.ಇದರಿಂದ ಬೇಸತ್ತಿರುವ ಗ್ರಾಮಸ್ಥೆರು ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.
ಕೋಟ್))
ಹಲವು ವರ್ಷದಿಂದ ಈ ರಸ್ತೆ ಡಾಂಬರೀಕರಣವೇ ಕಂಡಿಲ್ಲ, ರಸ್ತೆಯ ಪಕ್ಕದಲ್ಲಿ ವರ್ಷದಿಂದ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಹಾಳಾಗುವುದಕ್ಕೆ ಕಾರಣವಾಗಿದೆ. ಶಾಸಕರ ಅನುದಾನದಲ್ಲಿ ಚರಂಡಿ ನಿರ್ಮಿಸಿದರೆ ಮಳೆಯ ನೀರು ಸರಗವಾಗಿ ಹರಿಯುತ್ತದೆ. ಜತೆಗೆ ರಸ್ತೆ ಸರಿಪಡಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ,. ಉಸ್ತುವಾರಿ ಸಚಿವರೂ ಆಗಿರುವ ಕೆ.ಎಚ್.ಮುನಿಯಪ್ಪ ಈ ಬಗ್ಗೆ ಗಮನಹರಿಸಬೇಕು.
ಮಂಜುನಾಥ್ ಭಟ್ಟರವಾರೇನಹಳ್ಳಿ ವಾಹನ ಸವಾರ