

ರಾಯಚೂರು ಮುಂಗಾರು ಪೂರ್ವ ಮಳೆಯಿಂದ ಭತ್ತದ ಬೆಳೆ ನಾಶವಾಗಿದೆ. ಪರಿಹಾರ ನೀಡುವ ಜಿಲ್ಲಾಡಳಿತ ಯಾವ ಕ್ರಮಕ್ಕೂ ಮುಂದಾಗುತ್ತಿಲ್ಲ. ಬೇಸಿಗೆಯ ಭತ್ತ ಬೆಳೆಗೆ ರಾಷ್ಟ್ರೀಯ ಫಸಲ್ ಭೀಮಾ ಯೋಜನೆಯಡಿ ಪರಿಹಾರವೂ ವಿತರಣೆ ಮುಂದಾಗುತ್ತಿಲ್ಲವೆಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಅಕ್ರೋಶ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾರುಕಟ್ಟೆಯಲ್ಲಿ ಭತ್ತ ಬೆಲೆ ಕುಸಿತವಾಗಿದೆ. ಆರ್‌ಎನ್‌ಆರ್ ಭತ್ತ ಮಾರುಕಟ್ಟೆಯಯಲ್ಲಿ 1700 ರಿಂದ 1800 ರೂ ಗಳಿಗೆ ಪ್ರತಿಕ್ವಿಂಟಾಲ್ ಖರೀದಿಯಾಗುತ್ತಿದೆ. ಆದರೆ ಸರ್ಕಾರ ಬೆಂಬಲ ಬೆಲೆ 2,330 ರೂ ನಿಗಧಿ ಮಾಡಿದೆ.ಆದರೂ ಖರೀದಿಗೆ ಮುಂದಾಗುತ್ತಿಲ್ಲ. ಜೋಳ ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ ಆದರೆ ಮಾನ್ವಿ ತಾಲೂಕ ಒಂದರಲ್ಲಿಯೇ ಟ್ರಾಕ್ಟರ್‌ಗಳು ಜೋಳ ಮಾರಾಟಕ್ಕೆ ಕಾದುಕುಳಿತಿವೆ. ಖರೀದಿಸಿದ ಜೋಳಕ್ಕೆ ಒಂದು ತಿಂಗಳಾದರೂ ಹಣ ಪಾವತಿ ಮಾಡುತ್ತಿಲ್ಲ.
ಬಗರ ಹುಕುಂ ಸಾಗುವಳಿದಾರರಿಗೆ ಪಟ್ಟಾ ನೀಡಲು ಕಾರಣಗಳನ್ನು ಹೇಳಿ ಅರ್ಜಿಗಳನ್ನು ತಿರಸ್ಕರಿಸಿ ಒಕ್ಕಲೆಬ್ಬಿಸಲಾಗುತ್ತಿದೆ. ನಾರಾಯಣಪುರು ಬಲದಂಡೆ ಕಾಲುವೆ ಉಪಕಾಲುವೆ ಕಾಮಗಾರಿ ಅಪೂರ್ಣವಾಗಿ ನಿಂತಿದೆ. ನ್ಯಾ. ನಾಗಮೋಹನ ದಾಸ ನೇತೃತ್ವದ ಆಯೋಗ ಟೆಂಡರ್ ಅಕ್ರಮದ ಕುರಿತು ತನಿಖೆ ನಡೆಸಿದೆ. ಕ್ರಮವೂ ಆಗಿಲ್ಲ. ಕಾಮಗಾರಿಯೂ ಪ್ರಾರಂಭಿಸುತ್ತಿಲ್ಲ. ಅವೈಜ್ಞಾನಿಕವಾಗಿ ಟೋಲ್ ಅಳವಡಿಸಿ ಹಣವಸೂಲಿ ಮಾಡಲಾಗುತ್ತಿದೆ.
ಕೃಷಿಕ ಸಮಸ್ಯೆಗಳಿಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು , ಜನಪ್ರತಿನಿಧಿಗಳು ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದು ಎರಡು ವಾರದಲ್ಲಿ ಯಾವುದೇ ಕ್ರಮಕ್ಕೆ ಮುಂದಾಗದೇ ಇದ್ದರೆ ಸಚಿವರಿಗೆ ಕಂಡಲ್ಲಿ ಘೇರಾವ್ ಸೇರಿದಂತೆ ಬಲವಾದ ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್, ಬೂದಯ್ಯಸ್ವಾಮಿ, ದೇವಣ್ಣ ನಾಯಕ, ಬಸವರಾಜ ನವಲಕಲ್, ಒಳ್ಳೆಣ್ಣಿ ನಾಗಿರೆಡ್ಡಿ, ಗೋವಿಂದ ನಾಯಕ, ರವಿ ಗಬ್ಬೂರು ಇದ್ದರು.