

ಕೊಟ್ಟೂರು: ಶೈಕ್ಷಣಿಕ ಕೇಂದ್ರ ಕೊಟ್ಟೂರಿನಲ್ಲಿ ಖಾಸಗಿ ಕಾಲೇಜುಗಳ ಪೈಪೋಟಿ ನಡುವೆಯೂ ಸ್ವಾತಂತ್ರ್ಯ ಹೋರಾಟಗಾರ ಗೊರ್ಲಿ ಶರಣಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜ್ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಗಮನ ಸೆಳೆದಿದೆ. ಆದರೆ, ಅಗತ್ಯ ಉಪನ್ಯಾಸಕರು ಹಾಗೂ ಹಲವು ಕೊರತೆಗಳಿಂದ ಬಳಲುತ್ತಿದೆ.
ಬಡ-ಮಧ್ಯಮ ವರ್ಗ ಮಕ್ಕಳು ಖಾಸಗಿ ಕಾಲೇಜ್‌ಗಳಲ್ಲಿ ಶುಲ್ಕ ಭರಿಸಲಾಗದೆ ಸರ್ಕಾರಿ ಪಪೂ ಕಾಲೇಜಿಗೆ ಸೇರಿ, 2023ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಆರು ಮತ್ತು ಏಳನೇ ರ‌್ಯಾಂಕ್ ಮುಡಿಗೇರಿಸಿಕೊಂಡಿದ್ದಾರೆ.
ಜಿಲ್ಲೆಗೆ ಕಾಲೇಜು ದ್ವಿತೀಯ ಸ್ಥಾನ ಗಳಿಸಿದೆ. ವಿಜ್ಞಾನ, ವಾಣಿಜ್ಯ, ಕಲಾ ವಿಭಾಗಕ್ಕೆ ಪ್ರಥಮ ಮತ್ತು ದ್ವಿತೀಯ ಪಿಯುಸಿ ಸೇರಿ ಕನಿಷ್ಠ 1,500 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಆಶ್ಚರ್ಯವೆಂದರೆ ಈ ಸಂಖ್ಯೆ ಇಲ್ಲಿನ ಖಾಸಗಿ ಕಾಲೇಜ್‌ನಲ್ಲಿಯೂ ಇಲ್ಲವಾಗಿದ್ದು, ಇದೊಂದು ದಾಖಲೆಯೇ ಸರಿ. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮುಗಿಬಿದ್ದು ಪ್ರವೇಶ ಪಡೆಯುತ್ತಿರುವುದು ಮುಂದುವರಿದಿದೆ.
ಆದರೆ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉಪನ್ಯಾಸಕರಿಲ್ಲ. ಶಾಶ್ವತ ಸಂಸ್ಕೃತ, ಕನ್ನಡ ಐಚ್ಛಿಕ, ವಾಣಿಜ್ಯ, ಸಮಾಜ ಶಾಸ್ತ್ರ ಬೋಧಕರೂ ಇಲ್ಲ. ಕಾಲೇಜ್‌ನಲ್ಲಿ ಗ್ರಂಥಾಲಯವಿದ್ದರೂ ಗ್ರಂಥಪಾಲಕರಿಲ್ಲ. ಇಷ್ಟೇ ಅಲ್ಲ, ಗುಮಾಸ್ತರು, ಜವಾನರು, ಡಿ.ಗ್ರೂಪ್ ನೌಕರರ ಕೊರತೆ ಸಹ ಕಾಡುತ್ತಿದೆ.
ಇಷ್ಟೆಲ್ಲ ಸಮಸ್ಯೆಗಳ ನಡುವೆ ಅತಿಥಿ ಉಪನ್ಯಾಸಕರ ಬೋಧನೆ ಆಲಿಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವರಕನಹಳ್ಳಿ ಮಹಾಲಕ್ಷ್ಮೀ 600ಕ್ಕೆ 587 ಅಂಕ, ಬಾರಿಕರ ಶೇತಾ ಕುಮಾರಿ 600ಕ್ಕೆ 586 ಅಂಕಗಳಿಸಿ ಕ್ರಮವಾಗಿ ರಾಜ್ಯಕ್ಕೆ ಆರು ಮತ್ತು ಏಳನೇ ರ‌್ಯಾಂಕ್ ಪಡೆಯುವ ಮೂಲಕ ಖಾಸಗಿ ಕಾಲೇಜ್‌ನವರು ಹುಬ್ಬೇರಿಸುವಂತೆ ಮಾಡಿದ್ದಾರೆ.
ಈ ಸರ್ಕಾರಿ ಪಪೂ ಕಾಲೇಜು 2007-08ರಲ್ಲಿ ಆರಂಭವಾಗಿದೆ. ಕೇವಲ ಒಂದೂವರೆ ದಶಕದಲ್ಲಿ ಇಲ್ಲಿನ ಖಾಸಗಿ ಕಾಲೇಜ್‌ಗಳ ಪೈಪೋಟಿ ಎದುರಿಸಿ ರ‌್ಯಾಂಕ್‌ಗಳನ್ನು ಮುಡಿಗೇರಿಸುವ ಮಟ್ಟಕ್ಕೆ ಬೆಳೆದಿದೆ. ಶಿಕ್ಷಣ ಇಲಾಖೆ, ಕಾಲೇಜ್ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡರೆ ಪ್ರಥಮ ರ‌್ಯಾಂಕ್ ಪಡೆದರೆ ಅಚ್ಚರಿಪಡಬೇಕಿಲ್ಲ.
ಶಾಸಕ ನೇಮಿರಾಜ ನಾಯ್ಕ ಕಾಲೇಜ್ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದು, ಸದಸ್ಯರನ್ನು ನೇಮಕ ಮಾಡುವ ಅಧಿಕಾರ ಹೊಂದಿದ್ದಾರೆ. ಈ ಹಿಂದೆ ಶಾಲೆ ಮುಖ ನೋಡದ, ಶಿಕ್ಷಣದ ಅರಿವು ಇಲ್ಲದ, ಕಾಲೇಜ್‌ನತ್ತ ಬಾರದವರನ್ನು ಸದಸ್ಯರನ್ನಾಗಿ ನೇಮಕಮಾಡಿದ್ದಕ್ಕೆ ಶಿಕ್ಷಣ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದರು. ಈ ಸಲ ಶಿಕ್ಷಣದ ಬಗ್ಗೆ ಜ್ಞಾನ ಮತ್ತು ಕಾಳಜಿ ಇರುವವರನ್ನು ಆಯ್ಕೆ ಮಾಡಿದರೆ ಕಾಲೇಜು ಅಭಿವೃದ್ಧಿಯತ್ತ ಮುನ್ನಡೆಯಲು ಸಹಕಾರಿಯಾಗಲಿದೆ ಎಂಬ ಒತ್ತಾಯ ಕೇಳಿಬಂದಿದೆ.