

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ವಿದ್ಯಾಕಾಶಿ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್(ಗ್ಲೇಡ್ಸ್) ನಾಲ್ಕು ವರ್ಷಗಳ ಬಳಿಕ ರಣಜಿ ಕ್ರಿಕೆಟ್ ಆತಿಥ್ಯ ವಹಿಸಿದ್ದು, ಕ್ರಿಕೆಟ್ ಆಸಕ್ತರ ಸಂಭ್ರಮ ಮುಗಿಲು ಮುಟ್ಟಿದೆ.
ಗ್ಲೇಡ್ಸ್ ಮೈದಾನದಲ್ಲಿ ಶುಕ್ರವಾರದಿಂದ ಆರಂಭವಾದ ಕರ್ನಾಟಕ ಹಾಗೂ ಗೋವಾ ತಂಡಗಳ ನಡುವಣ ರಣಜಿ ಪಂದ್ಯದಲ್ಲಿ ಸ್ಟಾರ್ ಕ್ರಿಕೆಟರ್‌ಗಳನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಮುಗಿಬಿದ್ದರು.
ಇದು ಕರ್ನಾಟಕಕ್ಕೆ ಈ ಋತುವಿನ ರಣಜಿ ಟೂರ್ನಿಯ ಮೂರನೇ ಪಂದ್ಯವಾಗಿದೆ. ಕರ್ನಾಟಕ ಮೊದಲ ದಿನ ಉತ್ತಮ ಪ್ರದರ್ಶನ ನೀಡಿದ್ದು, ನಗರದ ಕ್ರೀಡಾಭಿಮಾನಿಗಳು ಮತ್ತೆ ‘ರಣಜಿ ಕ್ರಿಕೆಟ್’ ಸಂಭ್ರಮದಲ್ಲಿ ಮುಳುಗಿದರು.