

ಮಡಿಕೇರಿ:
ಇಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಆಧಾರದಲ್ಲಿ ಬಿಜೆಪಿ ಈ ಚುನಾವಣೆಯನ್ನು ಎದುರಿಸುತ್ತಿದ್ದರೆ, ಹೊರಗಿನಿಂದ ಪಿಕ್‌ನಿಕ್ ರೀತಿಯಲ್ಲಿನ ಬಂದಿರುವ ಒಬ್ಬ ವೈದ್ಯ ಮತ್ತೊಬ್ಬ ವಕೀಲ ಹಣಬಲದಲ್ಲಿ ಚುನಾವಣೆ ಮಾಡುತ್ತಿದ್ದಾರೆ ಎಂದು ಮಡಿಕೇರಿ ಶಾಸಕ ಎಂ.ಪಿ ಅಪ್ಪಚ್ಚುರಂಜನ್ ಆರೋಪಿಸಿದರು.
ರಾಜ್ಯದಲ್ಲಿ ತಮ್ಮ ಸರ್ಕಾರ ಬಂದ ನಂತರ ಕೇಂದ್ರ ಸರ್ಕಾರದ ಸಹಕಾರದಲ್ಲಿ ಡಬಲ್ ಎಂಜಿನ್ ರೀತಿಯಲ್ಲಿ ಕೆಲಸ ಮಾಡಲಾಗಿದೆ. ಕೊಡಗಿನ ಇಬ್ಬರು ಶಾಸಕರು ಸ್ಥಳೀಯ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ ಮನೆ. ಅಪಾಯಕಾರಿ ಪ್ರದೇಶದಲ್ಲಿ ಇರುವವರಿಗೆ ಸುರಕ್ಷಿತ ಪ್ರದೇಶದಲ್ಲಿ ನೆಲೆ ಕೊಡಲಾಗಿದೆ. ಒಂದೊಂದು ಮನೆಗೂ ತಲಾ ೧೮ ಲಕ್ಷ ವೆಚ್ಚ ಮಾಡಲಾಗಿದೆ ಎಂದರು. ಶುಕ್ರವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಕೊರೊನಾ ಸಂದರ್ಭದಲ್ಲಿ ಸೇವೆ ಜತೆ ಸಂಘಟನೆ ಎನ್ನುವಂತೆ ದುಡಿಯಲಾಗಿದೆ. ಜನ ಸಾಮಾನ್ಯರಿಗೆ ಧೈರ್ಯ ತುಂಬುವುದರ ಜತೆಗೆ ಪ್ರತಿ ಮನೆಗಳಿಗೂ ಕೊರೊನಾ ಕಿಟ್ ಕೊಡಲಾಗಿದೆ. ಶವಸಂಸ್ಕಾರವನ್ನೂ ಮಾಡಿದ್ದೇವೆ. ಈ ಸಂದರ್ಭದಲ್ಲಿ ಯಾವುದೇ ಕಾಂಗ್ರೆಸ್‌ನವರು ಇರಲಿಲ್ಲ.
ಕಾಂಗ್ರೆಸ್ ಕಾಲದಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ಹಾನಿ ಪರಿಹಾರ ಕೊಡಲಾಗುತ್ತಿತ್ತು. ೩.೫ ರೂ. ಸಾವಿರ ಖರ್ಚು ಮಾಡಿ ೫೦೦ ರೂ. ಪಡೆಯುವ ಸ್ಥಿತಿ ಇತ್ತು. ಆದರೆ ಬಿಜೆಪಿ ಸರಕಾರ ಬಂದ ನಂತರ ಪರಿಹಾರ ಮೊತ್ತ ಹೆಚ್ಚಿಸಲಾಗಿದೆ. ಸುಲಭವಾಗಿಯೂ ಪರಿಹಾರ ಲಭಿಸುವಂತಾಗಿದೆ. ಕಳೆದ ೩ ವರ್ಷಗಳಲ್ಲಿ ವರ್ಷಕ್ಕೆ ತಲಾ ೬೬, ೧೦೩, ೧೩೮ ಕೋಟಿ ರೂ. ಪರಿಹಾರ ಜಿಲ್ಲೆಯ ರೈತರಿಗೆ ವಿತರಿಸಲಾಗಿದೆ.
ಮೊದಲು ಎಲ್ಲರ ಮನೆಗೂ ಬೆಳಕು ಕೊಡಲಾಗಿತ್ತು. ಈಗ ಜಿಲ್ಲೆಯಲ್ಲಿ ೩೫೦ ಕೋಟಿ ರೂ. ವೆಚ್ಚದಲ್ಲಿ ಜಲಜೀವನ್ ಯೋಜನೆ ಮೂಲಕ ಮನೆ ಮನೆಗೂ ನೀರು ತಲುಪಿಸಲಾಗಿದೆ. ಕೊಡವ ಸೇರಿದಂತೆ ಅಗತ್ಯವಿರುವ ಎಲ್ಲಾ ಜನಾಂಗಕ್ಕೂ ನಿಗಮ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಬಲಿಷ್ಠವಾಗಿದ್ದು. ಎಲ್ಲರೂ ಹಂಚಿಕೊಂಡು ಕೆಲಸ ಮಾಡುತ್ತಿದ್ದಾರೆ. ಸದ್ಯದಲ್ಲೇ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು. ಮಂದೆ ಟೂರಿಸ್ಟ್ ಕಾರಿಡಾರ್ ಮೂಲಕ ೧೮ ಗ್ರಾಮಗಳನ್ನು ಸಂಪರ್ಕಿಸುವ ಯೋಜನೆ ಇದೆ ಎಂದ ಅವರು, ಇಲ್ಲಿಯ ಇಬ್ಬರು ಶಾಸಕರೂ ೨೫ ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಶಾಸಕರು ಮಾಡಿದ ಅಭಿವೃದ್ಧಿ ಕೆಲಸವನ್ನು ಮನೆ ಮನೆಗೆ ತಲುಪಿಸಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರ ಪಕ್ಷ. ಎಲ್ಲರೂ ಗೆಲುವಿನ ಹುರುಪಿನಿಂದ ಕೆಲಸ ಮಾಡುತ್ತಿದ್ದಾರೆ ಎಂದರು.
ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಮಾತನಾಡಿ, ಬಿಜೆಪಿ ಅಭಿವೃದ್ಧಿ ಮುಂದಿಟ್ಟುಕೊಂಡು ಮತ ಯಾಚನೆ ಮಾಡುತ್ತಿದ್ದರೆ, ಕಾಂಗ್ರೆಸ್ ಜಾತಿ ರಾಜಕೀಯ ಮಾಡುತ್ತಿದೆ.
ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೇ ಸಮ್ಮಿಶ್ರ ಸರಕಾರ ಇದ್ದ ಹಾಗೆ ಇದ್ದಾರೆ. ಅವರ ಅಪ್ಪ ಒಂದು ಪಕ್ಷ, ಮಗ ಮತ್ತೊಂದು ಪಕ್ಷ. ಅಭ್ಯರ್ಥಿ ಒಂದು ಜಾತಿ, ಅವರ ಪತ್ನಿ ಒಂದು ಜಾತಿ ಹೇಳಿಕೊಂಡು ಮತಯಾಚನೆ ಮಾಡುತ್ತಿದ್ದಾರೆ. ಅವರು ಈ ಮೊದಲು ಕೊಡಗಿನಲ್ಲಿ ಎಂಎಲ್‌ಸಿ ಅಭ್ಯರ್ಥಿ ಆಗಿದ್ದರು, ಈಗ ಎಂಎಲ್‌ಎ ಅಭ್ಯರ್ಥಿ ಆಗಿದ್ದಾರೆ. ಮುಂದೆ ಕಾಂಗ್ರೆಸ್ ಎಂಪಿ ಅಭ್ಯರ್ಥಿಯೂ ಆಗುತ್ತಾರೆ ಎಂದು ಲೇವಡಿ ಮಾಡಿದರು.
ಪಕ್ಷದ ಪ್ರಮುಖರಾದ ಮನು ನಂಜುಂಡ, ಕಾಂಗೀರ ಅಶ್ವಿನ್, ಅರುಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಇದ್ದರು.
ಶನಿವಾರ (ಏ.೨೯) ಮಡಿಕೇರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರೋಡ್ ಶೋ ನಡೆಯಲಿದೆ. ಚೌಡೇಶ್ವರಿ ದೇವಾಲಯದಿಂದ ಜ. ತಿಮ್ಮಯ್ಯ ವೃತ್ತದ ತನಕ ಬೆಳಗ್ಗೆ ೧೦ ಗಂಟೆಗೆ ನಡೆಯುವ ರೋಡ್ ಶೋದಲ್ಲಿ ೫-೬ ಸಾವಿರ ಜನ ಸೇರಬಹುದು ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು. ಈ ಮೊದಲು ಗಾಂಧಿ ಮೈದಾನದಲ್ಲಿ ಸಮಾವೇಶ ನಿಗದಿಯಾಗಿತ್ತು. ಆದರೆ ಅಲ್ಲಿ ಪಕ್ಕದ ಶಾಲೆಯಲ್ಲಿ ನವೋದಯ ಪ್ರವೇಶ ಪರೀಕ್ಷೆ ಇರುವುದರಿಂದ ಮಕ್ಕಳ ಹಿತದೃಷ್ಟಿ ಗಮನಿಸಿ ಸಮಾವೇಶ ರದ್ದು ಮಾಡಲಾಗಿದ್ದು, ರೋಡ್ ಶೋ ಮಾತ್ರ ನಡೆಯಲಿದೆ. ಜ. ತಿಮ್ಮಯ್ಯ ವೃತ್ತದ ಬಳಿ ಅಮಿತ್ ಶಾ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು.