

ಮಡಿಕೇರಿ:
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಆರಿಸಿ ಬಂದು ಮಡಿಕೇರಿ ಕ್ಷೇತ್ರದಲ್ಲಿ ಪ್ರವಾಸೋದ್ಯಮವನ್ನು ಸಿಂಗಪುರದ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಾಗಿ ಮಡಿಕೇರಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಂ. ಪಿ. ಅಪ್ಪಚ್ಚು ರಂಜನ್ ಹೇಳಿದರು. ಕುಶಾಲನಗರ ತಾಲೂಕು ನಂಜರಾಯಪಟ್ಟಣ ಪೈಸಾರಿಯ ಬೂತ್ ಸಭೆಯಲ್ಲಿ ಭಾಗವಹಿಸಿ ಗುರುವಾರ ಸಂಜೆ ಮಾತನಾಡಿದರು.
ಪ್ರವಾಸೋದ್ಯಮಕ್ಕೆ ವಿರೋಧ ಸಲ್ಲ ಎಂದ ಅವರು ಉದ್ಯಮದಿಂದ ಆಗುವ ಲಾಭಕ್ಕೆ ಸಿಂಗಪುರದ ಉದಾಹರಣೆ ನೀಡಿದರು. ಕಳೆದ ಐದು ಅವಧಿಯಲ್ಲಿ ಬಿಜೆಪಿ ಶಾಸಕರಾಗಿ ಮಾಡಿದ ಅಭಿವೃದ್ದಿ ಕೆಲಸಗಳ ಪಟ್ಟಿ ನೀಡಿದ ಅವರು ಕಳೆದ ಒಂದೇ ಅವಧಿಯ ಐದು ವರ್ಷಗಳಲ್ಲಿ ೧೮೦೦ ಕೋಟಿ ರೂ. ಗಳ ಅನುದಾನದಲ್ಲಿ ಆದ ಅಭಿವೃದ್ದಿ ಕೆಲಸ-ಕಾರ್ಯಗಳನ್ನು ವಿವರಿಸಿದರು. ಇದೀಗ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ಆಗಬೇಕಿದೆ ಎಂದರು.
ಪ್ರವಾಸೋದ್ಯಮದ ಅಭಿವೃದ್ಧಿಯಿಂದಾಗಿ ಪರಿಸರದ ಮೇಲೆ ಆಗುವ ಹಾನಿಯನ್ನು ಹೇಗೆ ನಿಯಂತ್ರಿಸಬಹುದು ಎನ್ನುವುದಕ್ಕೆ ಸಿಂಗಾಪುರ ಸಾಕ್ಷಿ ಎಂದ ಅಪ್ಪಚ್ಚು ರಂಜನ್, ಪ್ರವಾಸೋದ್ಯಮದ ಅಭಿವೃದ್ದಿಯಿಂದ ಲಕ್ಷಾಂತರ ಉದ್ಯೋಗಗಳು ಸೃಷ್ಠಿಯಾಗಿ ನಿರುದ್ಯೋಗದ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಲಿದೆ ಎಂದು ಹೇಳಿದರು.