

ಚಳ್ಳಕೆರೆ: ತಾಲೂಕಿನ ಮೀರಸಾಬಿಹಳ್ಳಿ ಸಮೀಪದ ರಾಣೀಕೆರೆ ಅಂಗಳವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಗ್ರಾಮಸ್ಥರು ತಹಸೀಲ್ದಾರ್ ರೆಹಾನ್ ಪಾಷಾ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಮೀರಸಾಬಿಹಳ್ಳಿ ಸೇರಿ ಇತರ ಗ್ರಾಮಗಳ ಕುರಿ-ಮೇಕೆ ಜಾನುವಾರುಗಳಿಗೆ ಮೇಯಲು ಕೆರೆ ಅಂಗಳದಲ್ಲಿ ಅನುಕೂಲವಿಲ್ಲದಂತೆ 10 ಎಕರೆಯಷ್ಟು ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ.
ಈಗಾಗಲೇ ಈರುಳ್ಳಿ, ಬೂದುಗುಂಬಳ, ಸೌತೆಕಾಯಿ, ಕಡಲೆ, ಜೋಳ ಬಿತ್ತನೆ ಮಾಡಿಕೊಳ್ಳಲಾಗಿದೆ. ಇದರಿಂದ ಜಾನುವಾರುಗಳಿಗೆ ಮೇಯಲು ತೀವ್ರ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ಹೇಳಿದರು.
ಈ ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಕೆರೆ ಅಂಗಳ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ದೊಡ್ಡೇರಿ ಗ್ರಾಪಂ ಅಧ್ಯಕ್ಷ ವೆಂಕಟೇಶ, ಸದಸ್ಯ ಆನಂದ, ಮಾಜಿ ಅಧ್ಯಕ್ಷ ಈರಣ್ಣ, ಚಂದ್ರಪ್ಪ, ಗೋವಿಂದಪ್ಪ, ಸಿರಿಯಣ್ಣ ಇತರರು ಒತ್ತಾಯಿಸಿದ್ದಾರೆ.