ರಾಣಿ ಮಾಚಯ್ಯಗೆ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದಿಂದ ಸನ್ಮಾನ

MDK04
Published on

ಮಡಿಕೇರಿ: ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಕೊಡಗಿನ ಜಾನಪದ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಅವರಿಗೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಆಡಳಿತ ಮಂಡಳಿ ವತಿಯಿಂದ ಸೋಮವಾರ ಸನ್ಮಾನಿಸಿ ಅಭಿನಂದಿಸಲಾಯಿತು.


ಕಾಲೇಜಿನ ನ್ಯಾಕ್ ಕೊಠಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಹಾಗೂ ಪದಾಧಿಕಾರಿಗಳು, ನಿರ್ದೇಶಕರು, ಕಾಲೇಜು ಉಪನ್ಯಾಸಕರು ಸನ್ಮಾನಿಸಿ ಗೌರವಿಸಿದರು. ಹಳೆ ವಿದ್ಯಾರ್ಥಿ ಸಂಘದ ನಿರ್ದೇಶಕಿಯಾಗಿರುವ ರಾಣಿ ಮಾಚಯ್ಯ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಎಲ್ಲರು ಸಂತಸ ವ್ಯಕ್ತಪಡಿಸಿ, ಅನಿಸಿಕೆ ಹಂಚಿಕೊಂಡರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಣಿ ಮಾಚಯ್ಯ, ಫೀ.ಮಾ. ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳು ನನ್ನ ತಂಡವನ್ನು ಪ್ರತಿನಿಧಿಸಿ ರಾಜ್ಯದ ಹನ್ನೆರಡು ಜಿಲ್ಲೆ, ದೇಶದ ೧೩ ರಾಜ್ಯದಲ್ಲಿ ಪ್ರದರ್ಶನ ನೀಡಿದ್ದಾರೆ. ನನಗೆ ಸಂದಿರುವ ಪ್ರಶಸ್ತಿಗೆ ನನ್ನ ಎಲ್ಲಾ ವಿದ್ಯಾರ್ಥಿಗಳು ಕಾರಣ ಎಂದರು.


ಜಾತಿ, ಧರ್ಮ ಭೇದವಿಲ್ಲದೆ ಎಲ್ಲಾ ವರ್ಗದ ಮಂದಿ ನನಗೆ ಸಹಕಾರ ನೀಡಿದ್ದಾರೆ. ಕೊಡವ ವಿದ್ಯಾರ್ಥಿಗಳು ಮಾತ್ರವಲ್ಲದೆ ಇತರೆ ಜನಾಂಗ, ಧರ್ಮದ ವಿದ್ಯಾರ್ಥಿಗಳು ನನ್ನ ತಂಡದಲ್ಲಿದ್ದಾರೆ. ಎಲ್ಲರನ್ನು ನನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದೇನೆ. ಪಾಲಕರು, ಕಾಲೇಜಿನ ಪ್ರಾಂಶುಪಾಲರ ಸಹಕಾರ ಕೂಡಾ ಮಹತ್ತರವಾಗಿದೆ ಎಂದು ಹೇಳಿದರು.


ಸಂಘದ ಉಪಾಧ್ಯಕ್ಷ ನಾಟೋಳಂಡ ಡಿ.ಚರ್ಮಣ, ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ನಿರ್ದೇಶರಾದ ನಂದಿನೆರವಂಡ ಅಪ್ಪಯ್ಯ, ಬಿದ್ದಂಡ ಕಾವೇರಿ ನಂಜಪ್ಪ, ಪುಟ್ಟಿಚಂಡ ಡಾನ್ ದೇವಯ್ಯ, ಕಿಶೋರ್ ರೈ ಕತ್ತಲೆಕಾಡು, ಬಲ್ಯಂಡ ವಿಜು ನಂಜಪ್ಪ, ಬೊಳಕಾರಂಡ ವಿಠಲ್ ತಿಮ್ಮಯ್ಯ, ನಂದಿನೆರವಂಡ ಅಪ್ಪಯ್ಯ, ನಂದಿನೆರವಂಡ ಚಿಯಣ್ಣ, ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ.ಶ್ರೀಧರ್ ಹೆಗಡೆ, ಉಪನ್ಯಾಸಕರು, ಕಚೇರಿ ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net