ನಾಡು, ರಾಷ್ಟ್ರಕ್ಕಾಗಿ ಬದುಕು ಸಮರ್ಪಿಸಿದ ಧೀಮಂತೆ

Chennamma 1
Published on

ಸಂಸದ ಕೋಟ ಶ್ರೀನಿವಾಸ ಪೂಜಾರಿ ಶ್ಲಾಘನೆ

ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ರಾಷ್ಟ್ರಭಕ್ತಿ, ಶೌರ್ಯ, ಶ್ರದ್ಧೆ, ಹೋರಾಟಕ್ಕೆ ಮತ್ತೊಂದು ಹೆಸರೇ ಕಿತ್ತೂರು ರಾಣಿ ಚನ್ನಮ್ಮ ಎನ್ನುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ. ಬೆಳಗಾವಿ ಜಿಲ್ಲೆಯ ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದು ರಾಣಿಯಾಗಿ ಆಳಿದ ಚೆನ್ನಮ್ಮ ರಾಷ್ಟ್ರದ ಗೌರವ ಕಾಪಾಡುವಲ್ಲಿ, ಕಿತ್ತೂರು ನಾಡಿನ ರಕ್ಷಣೆಗಾಗಿ ತನ್ನ ಬದುಕನ್ನೇ ಸಮರ್ಪಣೆ ಮಾಡಿದ ಧೀಮಂತೆ ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಶ್ಲಾಘಿಸಿದರು.

ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್​ ಹಾಲ್​ನಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಗುರುವಾರ (ಅ.23) ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯುವ ಸಮುದಾಯಕ್ಕೆ ಮಾಹಿತಿ ಅವಶ್ಯ

ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿ, ದೇಶ ಕಟ್ಟುವಲ್ಲಿ ಹಾಗೂ ಸ್ವಾತಂತ್ರ್ಯದ ಹೋರಾಟದಲ್ಲಿ ಚನ್ನಮ್ಮ ಬಹುಮುಖ್ಯ ಪಾತ್ರ ನಿಭಾಯಿಸಿದ್ದಾರೆ. ಆಕೆಯ ವಿಚಾರಧಾರೆ, ಬದುಕಿದ ರೀತಿ, ಸಾಧನೆ ಮತ್ತು ಕಿತ್ತೂರಿನ ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕು. ತನ್ಮೂಲಕ ದೇಶದ ಮಹಿಳೆಯರ ಶಕ್ತಿ ಜಾಗೃತಗೊಳಿಸಬೇಕು ಎಂದರು.

ಶರಣ ಸಾಹಿತ್ಯ ಪರಿಷತ್​ನ ಜಿಲ್ಲಾಧ್ಯಕ್ಷ ಡಾ.ನಿರಂಜನ್​ ಯು.ಸಿ. ಕಿತ್ತೂರು ರಾಣಿ ಚನ್ನಮ್ಮ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿ ಜಿಲ್ಲಾ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಜಗನ್ನಾಥ ಪಣಸಾಲೆ ಇತರರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಇಲಾಖೆಯ ಸಿಬ್ಬಂದಿ ವರ್ಷಾ ಬಿ. ಕೋಟ್ಯಾನ್​ ಕಾರ್ಯಕ್ರಮ ನಿರೂಪಿಸಿದರು.

Chennamma 2
ಬೆಳಗಾವಿ ಜಿಲ್ಲೆಯ ಭಾಗದಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಚನ್ನಮ್ಮ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಏಕಾಂಗಿಯಾಗಿ ಹೋರಾಟ ನಡೆಸಿದರು. ತನ್ಮೂಲಕ ಸಂಘಟನಾ ಶಕ್ತಿ ಬೆಳೆಸಿ, ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಥಮ ಮಹಿಳೆಯರ ಸಾಲಿಗೆ ಸೇರ್ಪಡೆಗೊಂಡರು. ಹೋರಾಟ, ಶಕ್ತಿ, ಆದರ್ಶಮಯ ಬದುಕಿನಿಂದ ಮಹಿಳೆಯರಿಗೆ ಸ್ಫೂರ್ತಿಯಾದರು.| ಕೋಟ ಶ್ರೀನಿವಾಸ ಪೂಜಾರಿ. ಉಡುಪಿ ಸಂಸದ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net