

ವಿಜಯವಾಣಿ ಸುದ್ದಿಜಾಲ ಉಡುಪಿ
ತುಳುನಾಡಿನ ಪರಂಪರೆಯೊಳಗೆ ಬಾಳಿದ ವೀರ ವನಿತೆ ಉಲ್ಲಾಳದ ರಾಣಿ ಅಬ್ಬಕ್ಕಳ ಯಶೋಗಾಥೆ ನಮಗೆಲ್ಲರಿಗೂ ಆದರಣೀಯ, ಅನುಕರಣೀಯವೂ ಆಗಿದೆ. ಕರಾವಳಿಯ ರಕ್ಷಣಾ ವ್ಯವಸ್ಥೆಯನ್ನು ಸಂವರ್ಧಿಸುವಲ್ಲಿ ಅಬ್ಬಕ್ಕಳ ಪಾತ್ರ, ಕೊಡುಗೆ ಅಪಾರವಾದುದು ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಅಭಿಪ್ರಾಯಪಟ್ಟರು.
ಉಡುಪಿಯ ತೆಂಕನಿಡಿಯೂರುನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ (ರಿ.) ಮಂಗಳೂರು ವಿಭಾಗ, ಕಾಲೇಜಿನ ಕನ್ನಡ ವಿಭಾಗ ಹಾಗೂ ಐಕ್ಯುಎಸಿ ಆಶ್ರಯದಲ್ಲಿ ರಾಣಿ ಅಬ್ಬಕ್ಕಳ 500ನೇ ಜಯಂತಿ ನಿಮಿತ್ತ ಪ್ರೇರಣಾದಾಯಿ ಉಪನ್ಯಾಸಗಳ ಸರಣಿ ಎಸಳು-77 ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದರು.
ಗುಜರಾತಿನ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಂಶೋಧನಾ ಮಾರ್ಗದರ್ಶಕಿ ಡಾ. ಮಾಲತಿ ಪೈ ರಾಣಿ ಅಬ್ಬಕ್ಕಳ ಜೀವನ ಮತ್ತು ಸಾಧನೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವ್ಕರ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ ಉಡುಪಿ ಘಟಕದ ಪ್ರತಿನಿಧಿ ಡಾ.ಭೈರವಿ ಪಾಂಡ್ಯ, ಕಾಲೇಜಿನ ಐಕ್ಯುಎಸಿ ಸಂಚಾಲಕ ಡಾ. ವಿಷ್ಣುಮೂರ್ತಿ ಪ್ರಭು, ಡಾ. ರೋಷನ್ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸುಶ್ಮಿತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ರತ್ನಮಾಲಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಉಪನ್ಯಾಸಕಿ ಅರ್ಚನಾ ವಂದಿಸಿದರು.