

ಮಡಿಕೇರಿ: ಮತದಾನ ಜಾಗೃತಿ ಅಭಿಯಾನ ಅಂಗವಾಗಿ ಭಾರತೀಯ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಮಡಿಕೇರಿ ನಗರಸಭೆಯ ವತಿಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ರಂಗೋಲಿ ಮತ್ತು ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಲಾಯಿತು.
ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಮ್ಮ ಸೃಜನಶೀಲ ಅಭಿವ್ಯಕ್ತಿಗೆ ರೂಪನೀಡಿದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲು ಮತ್ತು ಅಭಿಯಾನದ ಅಂಗವಾಗಿ ಪರಿಶೀಲನೆ ನಡೆಸಲು ಮುಖ್ಯ ಲೆಕ್ಕಾಧಿಕಾರಿಗಳಾದ ಜುವೆಲ್ ಖಾನ್‌ರವರು, ನಗರಸಭೆಯ ಪೌರಾಯುಕ್ತ ವಿಜಯ, ಎಇಇ ಸೌಮ್ಯ, ಕಂದಾಯ ಅಧಿಕಾರಿಗಳಾದ ಎಂ.ಎ.ತಾಹಿರ್ ಹಾಗೂ ಬೂತ್ ಮಟ್ಟದ ಅಧಿಕಾರಿಗಳು, ನಗರಸಭೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ವತಿಯಿಂದ ಪ್ರಾಂಶುಪಾಲ ಮೇಜರ್ ಪ್ರೊ.ರಾಘವ.ಬಿ ಅವರು, ಸಹ ಪ್ರಠ್ಯ ಚಟುವಟಿಕೆಯ ಸಂಯೋಜಕ ಡಾ.ರೇಣುಶ್ರೀ, ಕಾಲೇಜಿನ ಅಧ್ಯಾಪಕ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮತದಾನ ಪ್ರತಿಜ್ಞಾವಿಧಿಯನ್ನು ನಗರಸಭೆಯ ಕಮಿಷನರ್ ವಿಜಯರವರು ಬೋಧಿಸಿದರು. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.
ವಿಜೇತರ ವಿವರ: ರಂಗೋಲಿ ಸ್ಪರ್ಧೆಯಲ್ಲಿ ದ್ವಿತೀಯ ಎಂಕಾಂನ ಶಿವ(ಪ್ರ), ದ್ವಿತೀಯ ಬಿಕಾಂ ಯೋಗಿನಿ(ದ್ವಿ), ದ್ವಿತೀಯ ಎಂಎ ವಿದ್ಯಾರ್ಥಿ ಯಶೋಧ ತೃತೀಯ ಬಹುಮಾನ ಪಡೆದರು. ಚಿತ್ರಕಲೆ ಸ್ಪರ್ಧೆಯಲ್ಲಿ ದ್ವಿತೀಯ ಬಿಸಿಎ ವಿದ್ಯಾರ್ಥಿ ಪಿ.ವಿ.ರೋಹಿತ್(ಪ್ರ), ಪ್ರಥಮ ಬಿಎ ವಿದ್ಯಾರ್ಥಿ ಭೀಮಾ(ದ್ವಿ), ದ್ವಿತೀಯ ಬಿಸಿಎ ವಿದ್ಯಾರ್ಥಿ ಮೋನಿಕಾ ತೃತೀಯ ಬಹುಮಾನ ಪಡೆದುಕೊಂಡರು.