ರಸ್ತೆ ದುರಸ್ತಿಗೆ ಒತ್ತಾಯಿಸಿ ರಂಗೋಲಿ ಬಿಡಿಸಿ, ಗಿಡನೆಟ್ಟು ಪ್ರತಿಭಟನೆ

IMG-20220913-WA0023
Published on


ಮೈಸೂರು: ಸಂಪೂರ್ಣ ಹಾಳಾಗಿರುವ ನಗರದ ರಸ್ತೆಗಳನ್ನು ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿ ಕೆಆರ್‌ಎಂ ಫೌಂಡೇಷನ್ ವತಿಯಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.


ಪ್ರತಿಭಟನಾಕಾರರು ಕುವೆಂಪುನಗರದ ನೃಪತುಂಗ ರಸ್ತೆಯಲ್ಲಿ ಗುಂಡಿಗಳಿಗೆ ರಂಗೋಲಿ ಬಿಡಿಸಿ, ಗಿಡನೆಟ್ಟು ನಗರಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ನಗರದ ರಸ್ತೆಗಳೆಲ್ಲವೂ ಗುಂಡಿಮಯವಾಗಿದ್ದು, ವೃದ್ಧರು, ರೋಗಿಗಳು ಸಂಚರಿಸುವುದು ಕಷ್ಟವಾಗಿದೆ. ಶಾಲಾ ಮಕ್ಕಳು, ಕಾರ್ಮಿಕರು ಪ್ರತಿದಿನ ನರಕಯಾತನೆ ಅನುಭವಿಸುತ್ತಿದ್ದಾರೆ. ನಾಡಹಬ್ಬದ ಸಂದರ್ಭದಲ್ಲಿ ಮಾತ್ರ ಪ್ರಮುಖ ರಸ್ತೆಗಳ ದುರಸ್ತಿಯಾಗುತ್ತದೆ. ಆದರೆ, ಈ ಬಾರಿ ಎಲ್ಲ ಬಡಾವಣೆಗಳ ರಸ್ತೆಗಳೂ ಸಂಪೂರ್ಣ ಹದಗೆಟ್ಟಿದ್ದು, ನಗರಪಾಲಿಕೆ ಕೂಡಲೇ ಬಡಾವಣೆಗಳ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು. ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ಸಂದರ್ಭ ಕೆಲವು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಯಿತು. ಆ ರಸ್ತೆಗಳೂ ಗುಂಡಿ ಬೀಳುತ್ತಿವೆ. ಹಾಗಾಗಿ, ಇನ್ನು ಮುಂದೆ ಕೈಗೊಳ್ಳುವ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕೆಂದು ಆಗ್ರಹಿಸಿದರು.


ನಗರದಲ್ಲಿ ಗುಂಡಿಗಳನ್ನು ಮುಚ್ಚದೆ ಹೋದರೆ ಮುಂದಿನ ದಿನಗಳಲ್ಲಿ ಎಲ್ಲ ಗುಂಡಿಗಳಲ್ಲೂ ಬಿಜೆಪಿ ಬಾವುಟ ಹಾಗೂ ಶಾಸಕರ ಭಾವಚಿತ್ರ ನೆಡುವ ಮೂಲಕ ಪ್ರತಿಭಟಿಸುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಎನ್.ಎನ್.ನವೀನ್‌ಕುಮಾರ್, ಮುಖಂಡರಾದ ವಿನಯ್ ಕಣಗಾಲ್, ರಾಜೇಶ್, ಕಿರಣ್, ಭರತ್.ಬಿ, ವಾಸುದೇವ್ ಮೂರ್ತಿ, ಮಲ್ಲೇಶ್, ಉಮೇಶ್, ರವಿ, ಕುಮಾರ್, ವಿಜಯ್, ಆನಂದ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net