

ಸದೇಶ್ ಕಾರ್ಮಾಡ್ ಮೈಸೂರು
ಸ್ವಚ್ಛತೆಯಲ್ಲಿ ಪ್ರತಿ ವರ್ಷ ದೇಶದ ಗಮನ ಸೆಳೆಯುತ್ತಿದ್ದ ಸಾಂಸ್ಕೃತಿಕ ನಗರಿಯಲ್ಲಿ ಇತ್ತೀಚೆಗೆ ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ ಕಾಣುತ್ತಿದೆ. ಇದಕ್ಕೆ ಕಡಿವಾಣ ಹಾಕಲು ನಗರ ಪಾಲಿಕೆ ಒಂದೆಡೆ ದಂಡ ವಿಧಿಸುತ್ತಿದ್ದರೆ ಮತ್ತೊಂದೆಡೆ ತ್ಯಾಜ್ಯ ಸುರಿಯುತ್ತಿರುವ ಜಾಗಗಳಲ್ಲಿ ರಂಗೋಲಿ ಬಿಡಿಸಿ ಜನಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ.
ನಗರದ ಮನೆ ಮನೆಗಳಿಂದ ನಗರ ಪಾಲಿಕೆ ಪೌರ ಕಾರ್ಮಿಕರು ಪ್ರತಿನಿತ್ಯ ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ. ಹೀಗಿದ್ದರೂ ಕೆಲವರು ಪೌರ ಕಾರ್ಮಿಕರು ಮನೆ ಬಳಿಗೆ ಬಂದಾಗ ತ್ಯಾಜ್ಯವನ್ನು ನೀಡದೆ ರಸ್ತೆ ಬದಿಯಲ್ಲಿ ಕಸ ಎಸೆಯುತ್ತಿರುವ ದೃಶ್ಯಗಳು ಕಂಡು ಬಂದಿದೆ. ಸಾಕಷ್ಟು ಜನರಿಗೆ ದಂಡ ವಿಧಿಸಿದರೂ ತ್ಯಾಜ್ಯ ಎಸೆಯುವುದು ಮಾತ್ರ ನಿಂತಿಲ್ಲ. ಹೀಗಾಗಿ ಸ್ವಚ್ಛತೆಗೆ ಸಹಕರಿಸದೆ ಇರುವವರಿಗೆ ಪಾಲಿಕೆ ಅಧಿಕಾರಿ ಗಳು ದಂಡ ವಿಧಿಸುವ ಜತೆಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.
ಪೌರ ಕಾರ್ಮಿಕರು ಪ್ರತಿನಿತ್ಯ ರಸ್ತೆ ಬದಿ ಎಸೆದಿರುವ ತ್ಯಾಜ್ಯವನ್ನು ತೆರವುಗೊಳಿಸಿದ ನಂತರ ಆ ಸ್ಥಳದಲ್ಲಿ ರಂಗೋಲಿ ಬಿಡಿಸಿ ‘ಇಲ್ಲಿ ಯಾರು ಕಸ ಹಾಕಬಾರದು’ ಎಂದು ಬರೆದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಪೌರ ಕಾರ್ಮಿಕರು ಸ್ವಚ್ಛಗೊಳಿಸಿದ ಜಾಗದ ಫೋಟೋವನ್ನು ಪ್ರತಿನಿತ್ಯ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿ ಸಾಮಾಜಿಕ ಜಾಲತಾಣದಲ್ಲೂ ಜನಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಪಾಲಿಕೆಯ ಈ ಪ್ರಯತ್ನಕ್ಕೆ ಸದ್ಯಕ್ಕೆ ಪೂರಕ ಸ್ಪಂದನೆ ದೊರೆಯದೆ ಇದ್ದರೂ ಮುಂದಿನ ದಿನಗಳಲ್ಲಿ ಜನರ ಮನಸ್ಸು ಬದಲಾಗುವುದೇ ಎಂದು ಕಾದು ನೋಡಬೇಕಾಗಿದೆ.
ಕೆಲವು ವರ್ಷಗಳ ಹಿಂದೆ ನಗರದ ಹಲವಾರು ಭಾಗಗಳಲ್ಲಿ ಇದೇ ರೀತಿ ಜನರು ತ್ಯಾಜ್ಯ ಎಸೆಯುತ್ತಿದ್ದರು. ಜನರು ಪ್ರತಿನಿತ್ಯ ತ್ಯಾಜ್ಯ ಎಸೆಯುವ ಜಾಗವನ್ನು ಗುರುತಿಸಿದ ನಗರ ಪಾಲಿಕೆ ಅಂತಹ ಜಾಗಗಳ ಗೋಡೆಗಳ ಮೇಲೆ ಆಕರ್ಷಕ ಚಿತ್ರಗಳನ್ನು ಬಿಡಿಸುವ ಜತೆಗೆ ಜನರು ಕುಳಿತುಕೊಳ್ಳಲು ಆಸನದ ವ್ಯವಸ್ಥೆಗಳನ್ನು ಕಲ್ಪಿಸಿತು. ಈ ರೀತಿ ಅಭಿವೃದ್ಧಿ ಪಡಿಸಿದ ಹಲವಾರು ಜಾಗಗಳಲ್ಲಿ ಜನರು ತ್ಯಾಜ್ಯ ಎಸೆಯುವುದನ್ನು ನಿಲ್ಲಿಸಿದ್ದಾರೆ. ಆದರೆ, ಕೆಲವು ಜಾಗಗಳಲ್ಲಿ ಇಂದಿಗೂ ತ್ಯಾಜ್ಯ ಎಸೆಯುವುದನ್ನು ಜನರು ಮುಂದುವರೆಸಿದ್ದಾರೆ. ಈ ರೀತಿ ಸ್ವಚ್ಛತೆಯ ವಿಚಾರದಲ್ಲಿ ನಗರ ಪಾಲಿಕೆ ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ಗಮನ ಸೆಳೆಯುತ್ತಿದೆ.
ನಗರ ಪ್ರತಿ ವರ್ಷ ಸ್ವಚ್ಛ ಸರ್ವೇಕ್ಷಣೆಯ ರ‌್ಯಾಂಕಿಂಗ್‌ನಲ್ಲಿ ಕುಸಿತ ಕಾಣಲು ಪ್ರಾರಂಭಿಸಿದೆ. ಸ್ವಚ್ಛತೆಯಲ್ಲಿ ನಗರ 2015 ಮತ್ತು 2016 ರಲ್ಲಿ ಸತತ ಎರಡು ಬಾರಿ ನಂ.1 ಸ್ಥಾನ ಪಡೆಯಿತು. ನಂತರದ ವರ್ಷಗಳಲ್ಲಿ ಮರಳಿ ನಂ.1 ಸ್ಥಾನಕ್ಕೆ ಏರಲು ನಗರಕ್ಕೆ ಸಾಧ್ಯವಾಗಲಿಲ್ಲ. 2017ರಲ್ಲಿ 5ನೇ ಸ್ಥಾನ, 2018ರಲ್ಲಿ 8, 2019ರಲ್ಲಿ 3, 2020 ರಲ್ಲಿ 5, 2021ರಲ್ಲಿ 11, 2022ರಲ್ಲಿ 8 ಸ್ಥಾನ ಪಡೆದ ನಗರ, 2023ರಲ್ಲಿ 27ನೇ ಸ್ಥಾನ ಪಡೆಯುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಸ್ವಚ್ಛತೆ ಕುರಿತು ಇತ್ತೀಚೆಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಪ್ರತ್ಯೇಕ ಸಭೆ ನಡೆಸಿ ನಗರ ಪಾಲಿಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರಿಗೆ ಪಾಲಿಕೆ ದಂಡ ವಿಧಿಸುತ್ತಿದೆ. ಸಾರ್ವಜನಿಕ ರಸ್ತೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು, ಉಗುಳುವುದು, ಬಹಿರ್ದೆಸೆ ಮಾಡುವುದು, ಮೂತ್ರ ವಿಸರ್ಜಿಸುವುದು ಕಂಡು ಬಂದರೆ ಮೊದಲ ಬಾರಿ 500 ರೂ., ಪುನರಾವರ್ತನೆಗೆ 1,000 ರೂ. ದಂಡ ವಿಧಿಸಲಾಗುತ್ತಿದೆ. ನಗರವನ್ನು ಸ್ವಚ್ಛವಾಗಿಡಲು ನಗರ ಪಾಲಿಕೆ ಅಧಿಕಾರಿಗಳು ಹಾಗೂ ಪೌರ ಕಾರ್ಮಿಕರು ಪ್ರತಿನಿತ್ಯ ಶ್ರಮಿಸುತ್ತಿದ್ದರು. ಸಾರ್ವಜನಿಕರ ಸಹಕಾರ ದೊರೆತರೆ ಮೈಸೂರನ್ನು ಸ್ವಚ್ಛ ಹಾಗೂ ಸುಂದರ ನಗರವಾಗಿ ರೂಪಿಸಬಹುದು.
ನಗರದ ಹಲವಾರು ಕಡೆಗಳಲ್ಲಿ ಜನರು ತ್ಯಾಜ್ಯ ತಂದು ಎಸೆಯುತ್ತಿರುವುದು ಕಂಡು ಬಂದಿದೆ. ಸಾಕಷ್ಟು ಜನರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡುವ ಕಾರ್ಯ ಮಾಡಿದ್ದೇವೆ. ತ್ಯಾಜ್ಯ ಎಸೆಯುವ ಜಾಗವನ್ನು ಪ್ರತಿನಿತ್ಯ ಪೌರ ಕಾರ್ಮಿಕರು ಶುಚಿಗೊಳಿಸಿ ರಂಗೋಲಿ ಬಿಡಿಸಿ ಕಸ ಎಸೆಯದಂತೆ ಜಾಗೃತಿ ಮೂಡಿಸಲಾಗುತ್ತಿದೆ. ಸ್ವಚ್ಛತೆ ವಿಚಾರದಲ್ಲಿ ನಗರದ ಜನರು ಪಾಲಿಕೆಯೊಂದಿಗೆ ಕೈಜೋಡಿಸಿದರೆ ಮಾತ್ರ ನಗರ ಮತ್ತೆ ನಂ.1 ಸ್ವಚ್ಛ ನಗರಿಯಾಗಿ ರೂಪುಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಜನರ ಸಹಕಾರ ಅಗತ್ಯವಾಗಿದೆ.
ಡಾ.ವೆಂಕಟೇಶ್, ಪಾಲಿಕೆ ಆರೋಗ್ಯಾಧಿಕಾರಿ