ಕೆರೆಯಂತಾದ ರಂಗಿನಕಟ್ಟೆ ರಾಷ್ಟ್ರೀಯ ಹೆದ್ದಾರಿ

12bkl3_C (1)
Published on

ಭಟ್ಕಳ: ತಾಲೂಕಿನಾದ್ಯಂತ ಬುಧವಾರ ರಾತ್ರಿ ಆರಂಭವಾಗಿದ್ದ ಮಳೆ ಎಡಬಿಡದೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು ಮಾತ್ರವಲ್ಲದೆ ಪಟ್ಟಣದ ರಂಗಿನಕಟ್ಟೆ ರಾಷ್ಟ್ರೀಯ ಹೆದ್ದಾರಿ ಕೃತಕ ಕೆರೆಯಂತೆ ಸೃಷ್ಟಿಯಾಗಿದೆ.

ಹವಾಮಾನ ಇಲಾಖೆಯ ಮನ್ಸೂಚನೆಯಂತೆ ಬುಧವಾರ ರಾತ್ರಿಯಿಂದಲೆ ವರುಣನ ಆರ್ಭಟ ಪ್ರಾರಂಭವಾಗಿದ್ದು, ಗುರುವಾರವೂ ಬೆಳಗ್ಗೆ ಮಳೆ ಸುರಿಯಿತು. ಪಟ್ಟಣದ ಹೃದಯಭಾಗ ಭಟ್ಕಳ ಸಂಶುದ್ಧಿನ ಸರ್ಕಲ್​ನಲ್ಲಿ ಮತ್ತೆ್ತೕ ನೀರು ನಿಂತಿದ್ದರಿಂದ ಜನರು ತೊಂದರೆ ಅನುಭವಿಸಿದರು. ರಂಗಿನಕಟ್ಟೆಯ ಬಳಿ ವಾಹನ ಸವಾರರಿಗೆ ರಸ್ತೆ ಕಾಣದೆ ಪರಿತಪಿಸುವಂತಾಯಿತು. ಇದರಿಂದ ಕಿ.ಮೀ. ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು. ರಂಗಿನಕಟ್ಟೆಯಲ್ಲಿ ವಾಹನಗಳು ನೀರಿನಲ್ಲಿ ತೇಲುವಂತೆ ಬಾಸವಾಗುತ್ತಿದ್ದು ಹಲವರು ಈ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ತಗ್ಗು ಪ್ರದೇಶಗಳು ಜಲಾವೃತ: ಪಟ್ಟಣದ ಬೈಪಾಸ್, ಪುರವರ್ಗ, ಮುಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಹಲವು ಮನೆಗಳಲ್ಲಿ ನೀರು ನುಗ್ಗಿ ಜನರು ತೊಂದರೆ ಅನುಭವಿಸಿದರು. ಪಟ್ಟಣದ ನೆಹರು ರಸ್ತೆ, ವಿವಿ ರಸ್ತೆಯಲ್ಲಿ ನೀರು ಹರಿದು ರಸ್ತೆ ಚರಂಡಿಯನ್ನು ಒಂದು ಮಾಡಿದೆ. ಗುರವಾರ ಸಂಜೆಯ ಬಳಿಕ ಮಳೆಯ ಆರ್ಭಟ ಕೊಂಚ ತಗ್ಗಿದರಿಂದ ಸುಧಾರಿಸಿಕೊಳ್ಳಲು ಅವಕಾಶ ನೀಡಿತ್ತು. ಮುಟ್ಟಳ್ಳಿ ಬೈಪಾಸ್​ನಲ್ಲಿ ಶರಾಬಿ ನದಿಯ ನೀರಿನ ಮಟ್ಟ ರಸ್ತೆಯ ಮಟ್ಟಕ್ಕಿಂತಲೂ ಹೆಚ್ಚಾಗಿ ಅಪಾಯದ ಮನ್ಸೂಚನೆ ನೀಡಿತ್ತು. ಕೂಡಲೆ ಸ್ಥಳೀಯ ಯುವಕರು ಮಾನವ ಸರಪಳಿ ನಿರ್ವಿುಸಿ ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಿದರು. ಬಳಿಕವೂ ನೀರಿನ ಸೆಳೆತ ಹೆಚ್ಚಾಗುತ್ತಿರುವಂತೆ ಹಗ್ಗ ಕಟ್ಟಿ ಅಲ್ಲಿ ಸಂಚರಿಸುವವರಿಗೆ ರಕ್ಷಣೆ ನೀಡಿದರು. ಪಟ್ಟಣದ ಮುಖ್ಯರಸ್ತೆಯಲ್ಲೂ ಅಂಗಡಿ ಮುಂಗಟ್ಟುಗಳಲ್ಲಿ ನೀರು ನುಗ್ಗಿ ಅಂಗಡಿಕಾರರು ನಷ್ಟ ಅನುಭವಿಸುವಂತಾಯಿತು. ಶುಕ್ರವಾರವೂ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೊಷಿಸಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net