

ವಿಜಯವಾಣಿ ಸುದ್ದಿಜಾಲ ಧಾರವಾಡ
ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಸಾಂಸ್ಕೃತಿಕ ಕಲೋತ್ಸವ, ರಂಗಚಂದ್ರ ಪ್ರಶಸ್ತಿ ಪ್ರದಾನ ಹಾಗೂ ರಂಗ ಚಿಂತನೆ, ರಂಗ ಸಂಗೀತ, ನೃತ್ಯ ವೈಭವ ಕಾರ್ಯಕ್ರಮವನ್ನು ಜಿಲ್ಲಾ ಸಾಹಿತ್ಯ ಭವನದಲ್ಲಿ ಆ. 24ರಂದು ಸಂಜೆ 4.30ಕ್ಕೆ ಏರ್ಪಡಿಸಲಾಗಿದೆ.
ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಪ್ರಕಾಶ ಉಡಿಕೇರಿ, ಕುಮಾರ ಬೆಕ್ಕೇರಿ, ಶ್ರೀಧರ ಕುಲಕರ್ಣಿ, ಎನ್.ಡಿ. ದೇಸಾಯಿ, ಎಂ.ಎಸ್. ಫರಾಸ, ಎಸ್.ಎಂ. ದಾನಪ್ಪಗೌಡರ ಆಗಮಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸುವರು.
2024ರ ರಂಗಚಂದ್ರ ಪ್ರಶಸ್ತಿಯನ್ನು ಕುಂದಗೋಳ ತಾಲೂಕಿನ ಶಿರೂರು ಗ್ರಾಮದ ರಂಗಭೂಮಿ ಕಲಾವಿದ ಬಸವರಾಜ ಬೆಂಗೇರಿ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಬಂಕಾಪುರದ ಸಿದ್ದಲಿಂಗಪ್ಪ ನರೇಗಲ್ಲ ಅವರಿಗೆ ನೀಡಲಾಗುವುದು. ಮಹಾದೇವ ಸತ್ತಿಗೇರಿ ಅವರಿಗೆ ಹಾಸ್ಯ ಸಾಧಕ ಪ್ರಶಸ್ತಿ ನೀಡಲಾಗುವುದು.
ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ವಿವಿಧ ಕಲಾ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.