ಕಾಡಿನ ರಕ್ಷಣೆ ಎಲ್ಲ ನಾಗರಿಕರ ಹೊಣೆ

27 jlr
Published on

ಜಗಳೂರು: ಅರಣ್ಯ, ಕಾಡು ಪ್ರಾಣಿಗಳ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಬೇಕು. ಯುಗಾದಿ ಹಬ್ಬದ ನೆಪದಲ್ಲಿ ಪ್ರಾಣಿಗಳನ್ನು ಬೇಟೆಯಾಡುವುದು ಕಾನೂನು ಬಾಹಿರವಾಗಿದೆ ಎಂದು ರಂಗಯ್ಯನದುರ್ಗ ಅರಣ್ಯ ಇಲಾಖೆಯ ಅಧಿಕಾರಿ ಶಿವಕುಮಾರ್ ಹೇಳಿದರು.

ತಾಲೂಕಿನ ಕೆಳಗೋಟೆ ಗ್ರಾಮದಲ್ಲಿ ಬುಧವಾರ, ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಡು ಪ್ರಾಣಿಗಳನ್ನು ಬೇಟೆಯಾಡುವುದು ಅಪರಾಧ. ರಂಗಯ್ಯದುರ್ಗ ಕೊಂಡುಕುರಿ ಅಭಯಾರಣ್ಯದಲ್ಲಿ ಅಪರೂಪದ ಜೀವವೈವಿಧ್ಯದ ನಾಲ್ಕು ಕೊಂಬಿನ ಕೊಂಡುಕುರಿ, ಜತೆಗೆ ಕಾಡು ಹಂದಿ, ಕಿರುಬ, ಚಿಪ್ಪು ಹಂದಿ, ತೋಳ, ಮೊಲ ಸೇರಿ ನೂರಾರು ಜಾತಿಯ ಪ್ರಾಣಿ- ಪಕ್ಷಿಗಳು ಕಂಡುಬರುತ್ತವೆ. ಇಂತಹ ಅರಣ್ಯ ಸಂಪತ್ತು ಹೊಂದಿರುವ ಈ ಭಾಗದ ಜನರು ಭಾಗ್ಯವಂತರು. ಆದರೆ ಕೆಲವರು ಬೇಟೆಯಾಡುವುದನ್ನು ರೂಢಿ ಮಾಡಿಕೊಂಡು ಪ್ರಾಣಿಗಳ ಸಂತತಿ ನಾಶ ಮಾಡುತ್ತಿರುವುದು ಬೇಸರದ ವಿಚಾರವಾಗಿದೆ ಎಂದರು.

ಯುಗಾದಿ ಹಬ್ಬ ಆರಂಭವಾಗುತ್ತಿದೆ. ರಂಗಯ್ಯದುರ್ಗ ಕೊಂಡುಕುರಿ ಅರಣ್ಯ ವ್ಯಾಪ್ತಿಯ ಕೆಳಗೋಟೆ, ಗುಡ್ಡದನಿಂಗನಹಳ್ಳಿ, ಗೋಡೆ, ತಾರೇಹಳ್ಳಿ ಗ್ರಾಮಗಳಲ್ಲಿ ಯುಗಾದಿ ಹಬ್ಬದ ನೆಪದಲ್ಲಿ ಮೂರು ದಿನಗಳ ಕಾಲ ಕೆಲವರು ಅರಣ್ಯಕ್ಕೆ ನುಗ್ಗಿ ಕಾಡುಪ್ರಾಣಿಗಳನ್ನು ಬೇಟೆಯಾಡಿ ಸಂಭ್ರಮಿಸುವುದು ನಡೆದುಕೊಂಡು ಬಂದಿದೆ. ಆದರೆ ಇನ್ನು ಮುಂದೆ ಯಾವುದೇ ಪ್ರಾಣಿಗಳನ್ನು ಕೊಲ್ಲುವಂತಿಲ್ಲ. ವನ್ಯಜೀವಿಗಳ ಪ್ರಾಣ ತೆಗೆದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಗ್ರಾಪಂ ಸದಸ್ಯರಾದ ಶಿವಕುಮಾರ್, ನರೇಶ್, ಮುಖಂಡರಾದ ಅಹಮದ್ ಅಲಿ, ಬಸವರಾಜ್, ಪರಶುರಾಮ್ ಮಹೇಶ್, ಅರಣ್ಯ ವೀಕ್ಷಕರಾದ ಬಸವರಾಜ್, ಕೊಟ್ರೇಶ್, ಸಂತೋಷ್, ಚೇತನ್ ಸೇರಿ ಮತ್ತಿತರರಿದ್ದರು.

ಅರಣ್ಯ ನಾಶದಿಂದ ಆಪತ್ತು: ಮನುಷ್ಯ ಬದುಕಲು ಅರಣ್ಯಗಳ ಅವಶ್ಯಕತೆ ಇದೆ. ಅಂತಹ ಕಾಡುಗಳನ್ನು ನಾವು ನಾಶ ಮಾಡುತ್ತಾ ಬಂದಿದ್ದೇವೆ. ಹೀಗಾಗಿ ಇಂದು ಕಾಲ ಕಾಲಕ್ಕೆ ಮಳೆಯಾಗುತ್ತಿಲ್ಲ. ಮೃಗ-ಮಾನವರ ಸಂಘರ್ಷ ಮಿತಿ ಮೀರುತ್ತಿದೆ. ಈಗಲಾದರೂ ಅರಣ್ಯ ಮತ್ತು ಪ್ರಾಣಿಗಳ ಬಗ್ಗೆ ನಾಗರಿಕರು ಅರಿಯಬೇಕು ಎಂದು ಅರಣ್ಯಾಧಿಕಾರಿ ಅಧಿಕಾರಿ ಶಿವಕುಮಾರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net