ಗ್ರಾಮೀಣ ಪ್ರತಿಭೆ ಅನಾವರಣಕ್ಕೆ ‘ರಂಗಾಯಣ’ ಯತ್ನ

SRS RAJU TALIKOTE
Published on

ಶಿರಸಿ: ಧಾರವಾಡ ರಂಗಾಯಣ ವ್ಯಾಪ್ತಿಯ 7 ಜಿಲ್ಲೆಗಳಲ್ಲಿ ಗ್ರಾಮೀಣ ಪ್ರತಿಭೆಗಳನ್ನು ಬೆಳಕಿಗೆ ತರಲು ರಂಗಾಯಣದಿಂದ ಹಲವು ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ರಂಗಭೂಮಿ ಕಲಾವಿದರನ್ನು ಒಂದೆಡೆ ಸೇರಿಸಿ ಅವರ ಸಮಸ್ಯೆಗಳನ್ನು ಆಲಿಸುವ ಉದ್ದೇಶದಿಂದ ಜಿಲ್ಲಾ ಪ್ರವಾಸ ಮಾಡುತ್ತಿದ್ದು, ಕಲಾವಿದರು ರಂಗಾಸಕ್ತರು ಮುಂದೆ ಬರಬೇಕು ಎಂದು ಧಾರವಾಡ ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಗುಬ್ಬಿ ಗೂಡು ಕಟ್ಟುವ ರೀತಿಯಲ್ಲಿ ಒಂದೊಂದು ಎಳೆಯನ್ನು ತಂದು ರಂಗಾಯಣದ ಗೂಡು ಕಟ್ಟುವ ಕೆಲಸ ಮಾಡುತ್ತೇವೆ. ಒಳ್ಳೆಯ ರೀತಿಯಲ್ಲಿ ನಾಟಕಗಳನ್ನು ನಡೆಸುತ್ತಾ ಬಂದಿರುವ ಸಂಘಗಳನ್ನು ಪ್ರೋತ್ಸಾಹಿಸುತ್ತಿದ್ದೇವೆ. ಧಾರವಾಡ ರಂಗಾಯಣವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಸಲು ಶ್ರಮಿಸುತ್ತಿದ್ದೇವೆ. ಧಾರವಾಡ ರಂಗಾಯಣವನ್ನು ಮಾದರಿ ರಂಗಾಯಣವನ್ನಾಗಿ ಮಾಡಬೇಕಿದೆ ಎಂದರು.</p><p>ರಂಗಾಯಣಕ್ಕೆ ರಂಗ ಶಾಲೆ, ರಂಗ ಶಿಕ್ಷಕರು ಬೇಕು ಎಂದು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪೌರಾಣಿಕ ನಾಟಕ ಹಾಗೂ ಇತಿಹಾಸ ಪೂರಕ ನಾಟಕಗಳನ್ನು ಜನರಿಗೆ ತಲುಪಿಸುವ ಕಾರ್ಯ ಆಗಬೇಕಿದೆ. ರಂಗಾಯಣದ ಕೆಲಸಗಳು ಎಲ್ಲಾ ಜಿಲ್ಲೆಗಳ ಕಲಾವಿದರಿಗೂ ತಲುಪಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಕಲಾವಿದರ ಸಂಬಳ ಹೆಚ್ಚಿಸುವಂತೆ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.

ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಮಾತನಾಡಿ, ರಂಗಭೂಮಿಯ ಕಲಾವಿದರನ್ನು ಸೇರಿಸಿ ರಂಗ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಜಿಲ್ಲಾ ಪ್ರವಾಸ ನಡೆಸುತ್ತಿದ್ದೇವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ಹಳ್ಳಿಯಲ್ಲೂ ಕಲಾವಿದರಿದ್ದಾರೆ. ಗ್ರಾಮದ ದೇವಾಲಯಗಳ ವಾರ್ಷಿಕೋತ್ಸವ, ಶಾಲೆ-ಕಾಲೇಜುಗಳ ವಾರ್ಷಿಕೋತ್ಸವದಲ್ಲಿ ಮಾತ್ರ ತಮ್ಮ ಪ್ರದರ್ಶನ, ಪ್ರತಿಭೆ ತೋರುವ ಕೃಷಿಕ ಕಲಾವಿದರ ಸಂಖ್ಯೆ ಜಾಸ್ತಿ ಇದೆ. ರಂಗ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಬೇಕು. ಆ ನಿಟ್ಟಿನಲ್ಲಿ ರಂಗಾಯಣದಿಂದ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ನಾಟಕ ಶಿಬಿರಗಳನ್ನು ನಡೆಸಿ ರಂಗ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಯೋಚನೆ ನಮ್ಮದಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದರು. ರಂಗಕಲಾವಿದ ಚಂದ್ರು ಉಡುಪಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net