

ವಿಜಯವಾಣಿ ಸುದ್ದಿಜಾಲ ಉಡುಪಿ
ಡಾ.ಶಿವರಾಮ ಕಾರಂತರು ಮಕ್ಕಳ ಕುರಿತು ವಿಶೇಷ ಪ್ರೀತಿ ಹೊಂದಿದ್ದರು. ಮಕ್ಕಳು ಪ್ರಾಯೋಗಿಕ ಹಾಗೂ ಸೈದ್ಧಾಂತಿಕ ಎರಡೂ ರೀತಿಯಲ್ಲಿ ಕಲಿಯಬೇಕು ಎಂದು ಬಯಸುತ್ತಿದ್ದರು. ಆ ಕಾಳಜಿಯನ್ನು ಅವರ ಬರವಣಿಗೆಯಲ್ಲಿ ಕಾಣಬಹುದಾಗಿದೆ ಎಂದು ರಂಗವಲ್ಲಿಯ ಖ್ಯಾತ ಕಲಾವಿದೆ ಡಾ.ಭಾರತಿ ಮರವಂತೆ ಅಭಿಪ್ರಾಯಪಟ್ಟರು.
ಉಡುಪಿಯ ಅಂಪಾರುವಿನಲ್ಲಿರುವ ಸಂಜಯಗಾಂಧಿ ಪ್ರೌಢಶಾಲೆಯಲ್ಲಿ ಡಾ. ಕೋಟ ಶಿವರಾಮ ಕಾರಂತ ಟ್ರಸ್ಟ್ ಉಡುಪಿ ವತಿಯಿಂದ ಮಕ್ಕಳಿಗಾಗಿ ಕಾರಂತರು-1 ಅಭಿಯಾನದ ನಿಮಿತ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜೂನ್ 27ರಂದು ಆಯೋಜಿಸಿದ್ದ ರಂಗವಲ್ಲಿಯ ಮೂಲಕ ಕಾರಂತರು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಕೋಟ ಶಿವರಾಮ ಕಾರಂತ ಟ್ರಸ್ಟ್ನ ಅಧ್ಯಕ್ಷ ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ವಿದ್ಯಾರ್ಥಿಗಳು ಪಠ್ಯದೊಂದಿಗೆ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಅದರಿಂದ, ಕೌಶಲ ವೃದ್ಧಿಯಾಗುತ್ತದೆ. ಪುಸ್ತಕ ಓದುವ ಹವ್ಯಾಸ, ಬದುಕಿನ ಬರವಣಿಗೆ ರೂಢಿಸಿಕೊಂಡರೆ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ಶಾಲಾ ವಿದ್ಯಾರ್ಥಿಗಳಿಗೆ ಕಾರಂತರ ಬಾಲಪ್ರಪಂಚ, ಪ್ರಾಣಿ ಪ್ರಪಂಚ, ಪಕ್ಷಿಗಳ ಅದ್ಭುತ ಲೋಕ ಪುಸ್ತಕದಲ್ಲಿರುವ ಚಿತ್ರಗಳನ್ನು ರಂಗವಲ್ಲಿಯಲ್ಲಿ ಬಿಡಿಸುವ ಈ ವಿಶಿಷ್ಟ ಕಾರ್ಯಕ್ರಮವನ್ನು ಪ್ರೌಢಶಾಲಾ ಸಮಿತಿ ಫಂಡ್ನ ಅಧ್ಯಕ್ಷೆ ಶಾರದಾ ಉದ್ಘಾಟಿಸಿದರು.
ಸಂಜಯಗಾಂಧಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಚೈತ್ರಾ ಯಡಿಯಾಳ, ನಿವೃತ್ತ ದೈಹಿಕ ಶಿಕ್ಷಕ ಬಾಲಕೃಷ್ಣ ಶೆಟ್ಟಿ, ಶಿಕ್ಷಕಿ ಗೀತಾ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯ ಉದಯಕುಮಾರ್ ಬಿ. ಸ್ವಾಗತಿಸಿದರು. ಕಾವ್ಯಾ ಕಾರ್ಯಕ್ರಮ ನಿರೂಪಿಸಿದರು. ಸವಿತಾ ವಂದಿಸಿದರು.
ರಂಗವಲ್ಲಿಯನ್ನು ಕೇಂದ್ರವಾಗಿಟ್ಟುಕೊಂಡು ಕಾರಂತರ ಸ್ಮರಿಸುವ ಕಾರ್ಯವಿದು. ಅವರ ಕಾದಂಬರಿಗಳಲ್ಲಿ ಕಂಡುಬರುವ ಚಿತ್ರಗಳನ್ನು ಬಿಡಿಸಿ, ಕಾರಂತರನ್ನು ವಿದ್ಯಾರ್ಥಿಗಳಿಗೆ ವಿಶಿಷ್ಟವಾಗಿ ಪರಿಚಯಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. | ಡಾ.ಭಾರತಿ ಮರವಂತೆ. ರಂಗವಲ್ಲಿ ಕಲಾವಿದೆ