11ರಿಂದ ವನಸಿರಿಯಲ್ಲೊಂದು ರಂಗಸುಗ್ಗಿ ನಾಟಕೋತ್ಸವ

Published on

ಬೈಂದೂರು: ಹೊಸೂರು ಸಂಚಲನ ಕಲಾಸಂಘ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಿ.11, 12 ಹಾಗೂ 13ರಂದು ಹೊಸೂರು ಕೆ.ವಿ.ಸುಬ್ಬಣ್ಣ ಬಯಲು ವನರಂಗ ಮಂದಿರದಲ್ಲಿ ವನಸಿರಿಯಲ್ಲೊಂದು ರಂಗಸುಗ್ಗಿ ರಾಜ್ಯಮಟ್ಟದ ನಾಟಕೋತ್ಸವ ನಡೆಯಲಿದೆ ಎಂದು ಸಂಸ್ಥೆ ಖಜಾಂಚಿ ನಾಗಪ್ಪ ಮರಾಠಿ ಹೇಳಿದರು.

ಡಿ.11ರಂದು ಗಂಗೊಳ್ಳಿ ಎಸ್.ವಿ. ಕಾಲೇಜು ಉಪನ್ಯಾಸಕ ಸುಜಯೀಂದ್ರ ಹಂದೆ ರಾಜ್ಯಮಟ್ಟದ ಮೂರು ದಿನಗಳ ನಾಟಕೋತ್ಸವ ಉದ್ಘಾಟಿಸಲಿದ್ದಾರೆ. ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆ ವಹಿಸಲಿದ್ದಾರೆ. ಬೈಂದೂರು ವಲಯ ಮರಾಠಿ ಸಮಾಜದ ಅಧ್ಯಕ್ಷ ಭೋಜ ನಾಯ್ಕ ಶುಭಸಂಸನೆಗೈಯಲಿದ್ದಾರೆ. ನಾಟಿವೈದ್ಯ ಮಂಜ ಮರಾಠಿ ಗಂಗನಾಡು ಅವರನ್ನು ಸನ್ಮಾನಿಸಲಾಗುವುದು. ಬಳಿಕ ಮಣಿಪಾಲದ ಸಂಗಮ್ ಕಲಾವಿದೆರ್ ಅವರಿಂದ ಮೃತ್ಯುಂಜಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

12ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಸಮಾಜಸೇವಕ ಲಿಜೋ ಇ.ಜೆ. ಅಂಬಿಕಾನ್ ಅವರನ್ನು ಸನ್ಮಾನಿಸಲಾಗುವುದು. ನಂತರ ಅರೆಹೊಳೆ ಪ್ರತಿಷ್ಠಾನ ಮಂಗಳೂರು ನಂದಗೋಕುಲ ಕಲಾವಿದರಿಂದ ಬಿಡುವನೇ ಬ್ರಹ್ಮಲಿಂಗ ಮತ್ತು ಇತರ ನೃತ್ಯ ನಡೆಯಲಿದೆ. 13ರಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಲಿಂಗ ನಾಯ್ಕ ಜೋಗಿಜಡ್ಡು ಅವರನ್ನು ಸನ್ಮಾನಿಸಲಾಗುವುದು. ನಂತರ ಸುರಭಿ ಬೈಂದೂರು ಬಾಲ ಕಲಾವಿದರಿಂದ ಅಭಿಮನ್ಯು ಕಾಳಗ ಯಕ್ಷಗಾನ ಪ್ರದರ್ಶನ, ಹೊಸೂರು ಸಂಚಲನ ತಂಡದವರಿಂದ ಹೋಳಿನೃತ್ಯ ಹಾಗೂ ಮದ್ದಳೆ ಕುಣಿತ ನಡೆಯಲಿದೆ ಎಂದರು.

ಸಂಚಲನದ ಅಧ್ಯಕ್ಷ ಮಹಾದೇವ ಮರಾಠಿ, ಉಪಾಧ್ಯಕ್ಷ ನಾರಾಯಣ ಮರಾಠಿ, ದಯಾನಂದ ಮರಾಠಿ, ಕಾರ್ಯದರ್ಶಿ ರಾಜು ಮರಾಠಿ ಇದ್ದರು. ಸುಧಾಕರ ಪಿ. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net