

ಶ್ರೀರಂಗಪಟ್ಟಣ: ಆ.7ರಿಂದ ವಿಶ್ವವಿಖ್ಯಾತ ರಂಗನತಿಟ್ಟು ಪಕ್ಷಿಧಾಮ ಒಳಪ್ರವೇಶಕ್ಕೆ ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡುವ ಜತೆಗೆ ಕಾವೇರಿ ನದಿಯಲ್ಲಿ ದೋಣಿವಿಹಾರಕ್ಕೆ ಹೇರಿದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ.
ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆಯಿಂದ ಕಾವೇರಿ ನದಿಗೆ ಹೆಚ್ಚುವರಿ ನೀರು ಹೊರಬಿಟ್ಟ ಹಿನ್ನೆಲೆಯಲ್ಲಿ 15 ದಿನಗಳಿಂದ ಜೀವನದಿ ಪ್ರವಾಹದಿಂದ ಉಕ್ಕಿ ಹರಿದ ಹಿನ್ನೆಲೆಯಲ್ಲಿ ರಂಗನತಿಟ್ಟು ಪಕ್ಷಿಧಾಮ ಒಳ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿಷೇಧ ಹೇರಿ ಬಂದ್ ಮಾಡಲಾಗಿತ್ತು. ಇದೀಗ ಪ್ರವಾಹ ತಗ್ಗಿದ ಹಿನ್ನೆಲೆಯಲ್ಲಿ ನಿಷೇಧ ತೆರವು ಮಾಡಲಾಗಿದೆ.
ಇನ್ನು ರಂಗತಿಟ್ಟು ಪಕ್ಷಿಧಾಮ ಒಳಭಾಗದ ಕಾವೇರಿ ನದಿಯಲ್ಲಿ 1.70 ಲಕ್ಷ ಕ್ಯೂಸೆಕ್ ನೀರು ಪ್ರವಾಹದಿಂದ ಉಕ್ಕಿ ಹರಿದು ಉದ್ಯಾನವನದ ಹಲವೆಡೆ ಪಾದಚಾರಿ ರಸ್ತೆಗಳು ಕೊಚ್ಚಿಹೋಗಿ ಬೃಹತ್ ಹಳ್ಳ ಬಿದ್ದಿದ್ದವು. ಪ್ರಸ್ತುತ ರಂಗನತಿಟ್ಟು ಪಕ್ಷಿಧಾಮದಲ್ಲಿ ಹಾನಿಗೊಂಡ ಪಾದಚಾರಿ ರಸ್ತೆಗಳು ಹಾಗೂ ನೀರಿನ ಸೆಳೆತಕ್ಕೆ ಕಿತ್ತುಬಂದು ಎಲ್ಲೆಂದರಲ್ಲಿ ಬಿದ್ದಿದ್ದ ಕೆಲ ವಸ್ತುಗಳನ್ನು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ, ಮೈಸೂರು ವ್ಯಾಪ್ತಿಯ ಡಿಸಿಎಫ್ ಪ್ರಭುಗೌಡ ಈರಣ್ಣ ಬೀರಾದಾರ್, ಆರ್‌ಎಫ್‌ಒ ಸಂತೋಷ್ ಹೂಗಾರ್ ನೇತೃತ್ವದಲ್ಲಿ ಡಿಆರ್‌ಎಫ್‌ಒ ರವಿ ಹಾಗೂ ಇತರ ಅಧಿಕಾರಿಗಳು ಪರಿಶೀಲನೆ ನಡೆಸಿ ದುರಸ್ತಿ ಕಾಮಗಾರಿ ನಡೆಸಿದ್ದು, ಇದೀಗ ಪ್ರವಾಸಿಗರ ಒಳಪ್ರವೇಶಕ್ಕೆ ಮುಕ್ತವಾಗಿದೆ.
ಏತನ್ಮಧ್ಯೆ ಪಕ್ಷಿಧಾಮದ ಮಧ್ಯ ಭಾಗದಲ್ಲಿನ ಸಣ್ಣ-ಪುಟ್ಟ 25ಕ್ಕೂ ಹೆಚ್ಚು ಐಲ್ಯಾಂಡ್‌ಗಳಿಗೂ ದೋಣಿಯಲ್ಲಿ ತೆರಳಿದ ಅಧಿಕಾರಿಗಳು ಕಾವೇರಿ ಪ್ರವಾಹದಿಂದ ಕೊಚ್ಚಿಹೋಗಿರುವ ಐಲ್ಯಾಂಡ್‌ಗಳ ಕೆಲ ಸಣ್ಣಪುಟ್ಟ ಭಾಗಗಳು ಹಾಗೂ ಬಿದಿರು ಮರಗಳ ಬುಡಗಳನ್ನು ಪರಿಶೀಲಿಸಿ ಹಾನಿಯ ಬಗ್ಗೆ ಮಾಹಿತಿ ಸಂಗ್ರಹಿಸಿದರು.