

ತಿಪಟೂರು: ತಾಲೂಕಿನ ಸಾಸಲಹಳ್ಳಿ ಮತ್ತು ಗಂಗನಘಟ್ಟ ಗ್ರಾಮಗಳ ಮಧ್ಯದ ರಂಗನಾಥಸ್ವಾಮಿ ಉತ್ಸವಮೂರ್ತಿ ವಿವಾದಕ್ಕೆ ತೆರೆ ಎಳೆದಿರುವ ಜಿಲ್ಲಾಧಿಕಾರಿಗಳು, ಉತ್ಸವ ಮೂರ್ತಿ ಸಾಸಲಹಳ್ಳಿಗೆ ಸೇರಬೇಕು ಎಂದು ಆದೇಶಿಸಿದ್ದರೂ ಗಂಗನಘಟ್ಟ ಗ್ರಾಮಸ್ಥರು ಉತ್ಸವ ಮೂರ್ತಿ ನಮಗೇ ಬೇಕು ಎಂದು ಪಟ್ಟು ಹಿಡಿದಿದ್ದರಿಂದ ಜಿಲ್ಲಾಡಳಿತದ ಆದೇಶ ಪಾಲಿಸಲೇಬೇಕಿರುವ ತಾಲೂಕು ಆಡಳಿತಕ್ಕೆ ಎರಡೂ ಗ್ರಾಮಗಳ ಜನರ ಮನವೊಲಿಸುವುದು ಹಗ್ಗದ ಮೇಲಿನ ನಡಿಗೆಯಂತಾಗಿದೆ.
ಏನಿದು ಪ್ರಕರಣ?: ತಾಲೂಕಿನ ದಸರೀಘಟ್ಟ ಗ್ರಾಪಂ ವ್ಯಾಪ್ತಿಯ ಸಾಸಲಹಳ್ಳಿ ರಂಗನಾಥಸ್ವಾಮಿ ದೇವಸ್ಥಾನ ನಾಲ್ವಡಿ ಕೃಷ್ಣರಾಜ ಒಡಯರ್ ಕಾಲದಲ್ಲಿ ಗುರುತಿಸಲ್ಪಟ್ಟಿದ್ದು, 9.33 ಎಕರೆ ಇನಾಮು ಜಮೀನು ಹೊಂದಿದೆ. ಮುಜರಾಯಿ ಇಲಾಖೆಯ "ಸಿ' ವರ್ಗದ ದೇಗುಲಗಳ ಪಟ್ಟಿಯಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯದ ಉತ್ಸಮೂರ್ತಿಯನ್ನು ಸಮೀಪದ ಗಂಗನಘಟ್ಟ ಸೇರಿ ಸುತ್ತಲಹಳ್ಳಿಯವರು ಮದುವೆ ಸೇರಿ ಎಲ್ಲ ಶುಭಕಾರ್ಯಗಳಿಗೆ ಅರ್ಚಕರ ಸಮ್ಮುಖದಲ್ಲಿ ತೆಗೆದುಕೊಂಡು ಹೋಗಿ, ಪುನ@ ವಾಪಸ್ ತರುವುದು ರೂಢಿ. ಆದರೆ 2018-&19ರಲ್ಲಿ ಉತ್ಸವಮೂರ್ತಿಯನ್ನು ತೆಗೆದುಕೊಂಡ ಹೋದ ಗಂಗನಘಟ್ಟ ಗ್ರಾಮಸ್ಥರು ಮೂರ್ತಿಯನ್ನು ಮರಳಿ ಸಾಸಲಹಳ್ಳಿಗೆ ಕೊಡುವ ಬದಲು, ಗಂಗನಘಟ್ಟ ಗೇಟ್ ಬಳಿ ಪ್ರತಿಷ್ಠಾಪಿಸಲು ಮುಂದಾದಾಗ ಸಾಸಲಹಳ್ಳಿ ಜನ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಬಳಿಕ ಉಭಯ ಗ್ರಾಮಸ್ಥರು ಉತ್ಸವ ಮೂರ್ತಿ ತಮಗೇ ಸೇರಬೇಕೆಂದು ಪ್ರತಿಪಾದಿಸಿ ಧಾರ್ಮಿಕ ದತ್ತಿ ಇಲಾಖೆ, ಮುಜರಾಯಿ ಇಲಾಖೆ ಸೇರಿ ಕೋರ್ಟ್, ಕಚೇರಿಗೆ ಅಲೆದಾಡಿದ್ದರು. ಈ ಬಗ್ಗೆ 2020ರ ಜನವರಿ23ರಂದು "ರಂಗನಾಥಸ್ವಾಮಿಗೆ ಹಗ್ಗ ಜಗ್ಗಾಟ' ಶೀರ್ಷಿಕೆಯಡಿ ವಿಜಯವಾಣಿಯಲ್ಲಿ ಸಮಗ್ರ ವರದಿ ಸಹ ಪ್ರಕಟಗೊಂಡಿತ್ತು.
ಅಹಿತಕರ ಟನೆಗೆ ಆಸ್ಪದ ಬೇಡ
ಸಾಸಲಹಳ್ಳಿ ಸುಮಾರು 600 ಜನಸಂಖ್ಯೆ ಹೊಂದಿದ್ದು, ಗಂಗನಟ್ಟದಲ್ಲಿ 4 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಉಭಯ ಗ್ರಾಮಗಳ ನಡುವೆ ಉತ್ಸವಮೂರ್ತಿ ಹೊರತು ಈವರೆಗೆ ಯಾವುದೇ ಮನಸ್ತಾಪ ಇಲ್ಲ. ಸಾಸಲಹಳ್ಳಿ ಆಜೂಬಾಜು ಶೇ.50ರಷ್ಟು ಹೆಚ್ಚು ಜಮೀನು ಹೊಂದಿರುವ ಗಂಗನಟ್ಟ ಜನ ಸಾಸಲಹಳ್ಳಿಗೆ ಬಂದು ಕೃಷಿ ಚಟುವಟಿಕೆ ಮಾಡುತ್ತಾರೆ. ಇನ್ನು ಗಂಗನಘಟ್ಟ ಗ್ರಾಮದಲ್ಲಿರುವ ಸೊಸೈಟಿ, ಶಾಲೆ ಮತ್ತು ಹಾಲಿನ ಡೇರಿಗೆ ಸಾಸಲಹಳ್ಳಿಯವರು ಹೋಗಿ ಬರುತ್ತಾರೆ. ಉತ್ಸವಮೂರ್ತಿ ವಿಚಾರದಲ್ಲಿ ಎರಡೂ ಗ್ರಾಮಗಳ ಗ್ರಾಮಸ್ಥರು ಮನಸ್ತಾಪ ತೊರೆದು ಅಹಿತಕರ ಟನೆಗಳಿಗೆ ಆಸ್ಪದ ನೀಡದಂತೆ ಎಚ್ಚರ ವಹಿಸಬೇಕಿದೆ. ಈ ವಿಚಾರವಾಗಿ ವ್ಯಾಟ್ಸ್ಆ್ಯಪ್ ಸಂದೇಶಗಳನ್ನು ಕಳಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ವಿಮರ್ಶೆ ಮಾಡುವುದು, ಎರಡೂ ಗ್ರಾಮಗಳ ಸಾಮರಸ್ಯ ಹಾಳು ಮಾಡುವುದು ಕಂಡುಬಂದಲ್ಲಿ ಕಾನೂನು ಕ್ರಮ ವಹಿಸಲಾಗುವುದು ಎಂದು ತಹಸೀಲ್ದಾರ್ ಎಸ್.ಪವನ್ಕುಮಾರ್ ಎಚ್ಚರಿಸಿದರು.
ಜಿಲ್ಲಾಧಿಕಾರಿ ಆದೇಶ
ನ್ಯಾಯಾಲಯದ ಆದೇಶದಂತೆ ವಸ್ತುಸ್ಥಿತಿ ಪರಾಮರ್ಶಿಸುವ ಅಧಿಕಾರ ಪಡೆದ ಜಿಲ್ಲಾಧಿಕಾರಿಗಳು, ಶ್ರೀ ರಂಗನಾಥಸ್ವಾಮಿ ಉತ್ಸವಮೂರ್ತಿ ಸಾಸಲಹಳ್ಳಿ ದೇವಾಲಯಕ್ಕೆ ಸೇರಿದ್ದೆಂದು 2025ರ ಜ.6ರಂದು ತೀರ್ಮಾನಿಸಿ, ತಿಪಟೂರು ಉಪವಿಬಾಗಾಧಿಕಾರಿಗಳು ಮತ್ತು ತಹಸೀಲ್ದಾರ್ ಉಪಸ್ಥಿತಿಯಲ್ಲಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಉತ್ಸವ ಮೂರ್ತಿಯನ್ನು ತೆಗೆದುಕೊಂಡು ಸಾಸಲಹಳ್ಳಿಯಲ್ಲಿ ಪುನರ್ ಸ್ಥಾಪಿಸುವಂತೆ ಆದೇಶಿಸಿದ್ದರು. ಆದರೆ ಜಿಲ್ಲಾಧಿಕಾರಿಗಳ ಆದೇಶ ಪಾಲನೆ ಜತೆಗೆ ಎರಡೂ ಗ್ರಾಮಗಳಲ್ಲಿ ಶಾಂತಿ&-ಸುವ್ಯವಸ್ಥೆ ಕಾಪಾಡಬೇಕಾದ ಗುರುತರ ಜವಾಬ್ದಾರಿ ಹೊತ್ತಿರುವ ತಾಲೂಕು ಆಡಳಿತ ಇದೀಗ ಗ್ರಾಮಸ್ಥರ ನಡುವಿನ ಭಿನ್ನಮತ ಶಮನಗೊಳಿಸಿ ಒನ್ವೇ ಅನ್ನು ಟೂವೇ ಮಾಡಲು ಹರಸಾಹಸಪಡುತ್ತಿದೆ. ಈ ನಿಟ್ಟಿನಲ್ಲಿ ತಹಸೀಲ್ದಾರ್ ಎಸ್.ಪವನ್ಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ಸಂಜೆ ಎರಡೂ ಗ್ರಾಮದ ಮುಖಂಡರ ಶಾಂತಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಒಮ್ಮತ ಮೂಡಿಬರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ, ಎರಡೂ ಗ್ರಾಮಗಳ ಮುಖಂಡರು ಮತ್ತೆ ಸಭೆ ಸೇರಿ ಶಾಂತಿ, ಸಾಮರಸ್ಯದಿಂದ ಉತ್ಸವಮೂರ್ತಿ ವಿವಾದಕ್ಕೆ ತೆರೆ ಎಳೆಯುವಂತೆ ತಿಳಿಹೇಳಿದರಲ್ಲದೇ ಯಾವುದೇ ಅಹಿತಕರ ಘಟನೆ ನಡೆದರೆ ಕಾನೂನು ಕ್ರಮ ಅನಿವಾರ್ಯವಾಗಿದ್ದು, ಇದಕ್ಕೆ ಉಭಯ ಗ್ರಾಮಸ್ಥರು ಆಸ್ಪದ ನೀಡಬಾರದು ಎಂದೂ ತಹಸೀಲ್ದಾರ್ ಎಸ್.ಪವನ್ಕುಮಾರ್ ಎಚ್ಚರಿಕೆ ನೀಡಿದರು.