

ಮಂಡ್ಯ: ಶ್ರೀರಂಗಪಟ್ಟಣದ ರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ಫೆ.9 ರಿಂದ 19ರವರೆಗೆ ನಡೆಯಲಿದೆ. ಈ ಸಮಯದಲ್ಲಿ ಯಾವುದೇ ಲೋಪ ಉಂಟಾಗದಂತೆ ಮುನ್ನಚ್ಚರಿಕೆ ವಹಿಸಿ ವಿಜೃಂಭಣೆಯಿಂದ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ರಹ್ಮರಥೋತ್ಸವದಲ್ಲಿ ಸಹಸ್ರಾರು ಭಕ್ತರು ಹರ್ಷೋದ್ಗಾರದೊಂದಿಗೆ ಪಾಲ್ಗೊಳ್ಳುತ್ತಾರೆ. ಈ ಸಮಯದಲ್ಲಿ ಯಾವುದೇ ಅಹಿತಕರ ಅವಘಡ ಸಂಭವಿಸದಂತೆ ನೋಡಿಕೊಳ್ಳುವುದರ ಜತೆಗೆ ಅವರ ಸುರಕ್ಷತೆಗೆ ಹೆಚ್ಚಿನ ಆಧ್ಯತೆ ನೀಡಿ ಎಂದರು.
ರಥೋತ್ಸವದ ಜಾತ್ರೆಯಲ್ಲಿ ಅನಧಿಕೃತವಾಗಿ ಅಂಗಡಿ ಮುಂಗ್ಗಟ್ಟು, ಆಟಿಕೆಗಳಾದ ಜಾಯಿಂಟ್ ವೀಲ್ ಸೇರಿದಂತೆ ಇನ್ನಿತರ ಯಾವುದೇ ಅಂಗಡಿಯನ್ನು ಹಾಕದಂತೆ ನೋಡಿಕೊಳ್ಳಿ. ನಿಯಮ ಉಲ್ಲಂಘಿಸಿ ಹಾಕಿಯಲ್ಲಿ ಕಾನೂನು ಕ್ರಮ ಜರುಗಿಸಿ. ಬ್ರಹ್ಮೋತ್ಸವ ಹಾದು ಹೋಗುವ ಬೀದಿಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಭಕ್ತರಿಗೆ ಕುಡಿಯುವ ನೀರು, ಶೌಚಗೃಹ ಸೇರಿದಂತೆ ಇನ್ನಿತರ ಮೂಲ ಸೌಕರ್ಯ ಇರಲಿ. ಜತೆಗೆ ಆಂಬ್ಯುಲೆನ್ಸ್, ನುರಿತ ವೈದ್ಯರು ಇರಲಿ ಎಂದರು.
ಭಕ್ತರು ಬ್ರಹ್ಮರಥೋತ್ಸವ ಎಳೆಯಲು ಯೋಗ್ಯ ಸ್ಥಿತಿಯಲ್ಲಿರುವುದನ್ನು ದೃಢೀಕರಿಸಿಕೊಳ್ಳಬೇಕು. ರಥ ಚಲಿಸುವ ದೇವಾಲಯದ ಸುತ್ತಲು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಲಿ. ಯಾವುದೇ ಅಗ್ನಿ ಅವಘಡಗಳು ಸಂಭವಿಸಿದಂತೆ ಕ್ರಮವಹಿಸಿ. ರಥೋತ್ಸವಕ್ಕೆ ಆಗಮಿಸುವ ಅತಿಥಿ ಗಣ್ಯರು ಮತ್ತು ಅಧಿಕಾರಿಗಳ ಶಿಷ್ಟಾಚಾರದ ಬಗ್ಗೆ ನೋಡಿಕೊಳ್ಳಿ ಎಂದು ತಿಳಿಸಿದರು.
ಫೆ.9ರಂದು ಅಂಕುರಾರ್ಪಣ, ರಕ್ಷಾಬಂಧನ, 10ರಂದು 1ನೇ ತಿರುನಾಳ್ ಧ್ವಜಾರೋಹಣ, ರಾತ್ರಿ ಯಾಗಶಾಲೆ ಪ್ರವೇಶ, 11 ರಂದು 2ನೇ ತಿರುನಾಳ್ ಪ್ರಾಕಾರೋತ್ಸವ, 12ರಂದು 3ನೇ ತಿರುನಾಳ್ ಪ್ರಾಕಾರೋತ್ಸವ, 13ರಂದು 4ನೇ ತಿರುನಾಳ್ ಪ್ರಾಕಾರೋತ್ಸವ, 14ರಂದು 5ನೇ ತಿರುನಾಳ್ ಪ್ರಹ್ಲಾದ ಪರಿಪಾಲನೋತ್ಸವ, 15ರಂದು 6ನೇ ತಿರುನಾಳ್ ಗಜೇಂದ್ರ ಮೋಕ್ಷ ಉತ್ಸವ, 16ರಂದು 7ನೇ ತಿರುನಾಳ್ ಪ್ರಾತಃಕಾಲ ಬೆಳಗ್ಗೆ 6.30ಕ್ಕೆ ಸೂರ್ಯಮಂಡಲೋತ್ಸವ, ಮಧ್ಯಾಹ್ನ 1.30 ರಿಂದ 2ರವರೆಗೆ ಸಲ್ಲುವ ಶುಭ ಲಗ್ನದಲ್ಲಿ ರಥೋತ್ಸವ, 17ರಂದು 8ನೇ ತಿರುನಾಳ್ ಡೋಲೋತ್ಸವ ತಿರುವೇಡುಪರಿ ಉತ್ಸವ, 18ರಂದು 9ನೇ ತಿರುನಾಳ್ ಬೆಳಗ್ಗೆ ಸಂಧಾನ ಸೇವೆ ಅವಭೃತ ತೀರ್ಥಸ್ನಾನ, ರಾತ್ರಿ ಫಣಿಮಾಲೆ ಪೂರ್ಣಾಹುತಿ, 19ರಂದು ರಾತ್ರಿ ದ್ವಾದಶಾರಾಧನೆ ಪುಷ್ಪಯಾಗ, ಧ್ವಜಾರೋಹಣ, ಮೂಕಬಲಿ ಉತ್ಸವ ನಡೆಯಲಿವೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಮುಜರಾಯಿ ತಹಸೀಲ್ದಾರ್ ತಮ್ಮೇಗೌಡ, ಶ್ರೀರಂಗಪಟ್ಟಣ ತಹಸೀಲ್ದಾರ್ ಪರಶುರಾಮ್, ಶ್ರೀರಂಗನಾಥಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಉಮಾ ಇತರರಿದ್ದರು.