

ಹಿರೀಸಾವೆ: ಹೋಬಳಿಯ ಪುರಾಣ ಪ್ರಸಿದ್ಧ ಕ್ಷೇತ್ರ ಬೂಕನಬೆಟ್ಟದ ಶ್ರೀ ರಂಗನಾಥಸ್ವಾಮಿ ಸನ್ನಿಧಿಯಲ್ಲಿ 93 ನೇ ವರ್ಷದ ಬೃಹತ್ ದನಗಳ ಜಾತ್ರಾ ಮಹೋತ್ಸವದ ಪ್ರಯುಕ್ತ ಶುಕ್ರವಾರ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆ 11.30 ರ ವೇಳೆಗೆ ರಂಗನಾಥಸ್ವಾಮಿಯ ಕಳಸವನ್ನು ದೇಗುಲದಿಂದ ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ತಂದು ಬ್ರಹ್ಮರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ಬಳಿಕ ರಥಕ್ಕೆ ಅನ್ನ ಬಲಿಶಾಂತಿ ಮಾಡಲಾಯಿತು. ನಂತರ ರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ಮಂಗಳವಾದ್ಯದೊಂದಿಗೆ ಕರೆತಂದು ವಿವಿಧ ಪುಷ್ಪಗಳಿಂದ ಅಲಂಕೃತಗೊಂಡಿದ್ದ ಭವ್ಯ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. 12.5 ರ ವೇಳೆಗೆ ಶಾಸಕ ಸಿ.ಎನ್.ಬಾಲಕೃಷ್ಣ ಬ್ರಹ್ಮರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಈಡುಗಾಯಿ ಒಡೆದು ಉತ್ಸವಕ್ಕೆ ಚಾಲನೆ ನೀಡಿದರು. ತಕ್ಷಣ ಭಕ್ತರು ಹಗ್ಗ ಹಿಡಿದು ಗೋವಿಂದ ನಾಮ ಸ್ಮರಣೆಯೊಂದಿಗೆ ಬ್ರಹ್ಮರಥವನ್ನು ಎಳೆದರು. ನೆರೆದಿದ್ದ ಭಕ್ತರು ಬಾಳೆಹಣ್ಣು-ದವನ, ಹೂವು-ತುಳಸಿ ಪತ್ರೆಯನ್ನು ರಥದ ಮೇಲೆ ಎಸೆದು ಕರ್ಪೂರ ಬೆಳಗಿಸಿ ಹರಕೆ ಸಲ್ಲಿಸಿ ಪುನೀತರಾದರು.
ತಹಸೀಲ್ದಾರ್ ಬಿ.ಎಂ.ಗೋವಿಂದರಾಜ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ಹೇಮಾವತಿ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ತೋಟಿ ಜಯರಾಂ, ದೇಗುಲದ ಪಾರುಪತ್ತೇದಾರ ರಂಗರಾಜ್, ಪ್ರಮುಖರಾದ ಫೈನಾನ್ಸ್ ಮಹೇಶ್ ಇತರರಿದ್ದರು.