

ಮಂಡ್ಯ: ಜಿಲ್ಲೆಯ ಹಿರಿಯ ಮಹಾನ್ ನಾಯಕರ ಸಾಧನೆಯನ್ನು ಯುವಪೀಳಿಗೆಗೆ ಪರಿಚಯಿಸುವ ಕೆಲಸವಾಗಲಿ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಲಹೆ ನೀಡಿದರು.
ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಭೂಮಿ ಬೆಳಗು ಸಾಂಸ್ಕೃತಿಕ ಸಂಘ ಮಂಗಲ ವತಿಯಿಂದ ಆಯೋಜಿಸಿದ್ದ ಎರಡು ದಿನದ ನೀನಾಸಂ ತಿರುಗಾಟ ನಾಟಕ ಹಾಗೂ ಜಿಲ್ಲೆಯ ಮೊದಲ ಲೋಕಸಭಾ ಸದಸ್ಯ ದಿ.ಎಂ.ಕೆ.ಶಿವನಂಜಪ್ಪ ಅವರಿಗೆ ರಂಗನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯ ನಾಯಕರಿಗೆ ರಂಗನಮನ ಸಲ್ಲಿಸುತ್ತಿರುವುದು ಮೆಚ್ಚುಗೆಯ ವಿಷಯ. ಇಂತಹ ಕಾರ್ಯಕ್ರಮ ಆಯೋಜನೆ ಉದ್ದೇಶ ಯುವಪೀಳಿಗೆಗೆ ತಲುಪಬೇಕು ಎಂದರು.
ನಿವೃತ್ತ ಪ್ರಾಂಶುಪಾಲ ಪ್ರೊ.ಎಸ್.ಬಿ.ಶಂಕರೇಗೌಡ ಮಾತನಾಡಿ, ಸ್ವಾತಂತ್ರ್ಯ ನಂತರದ ಕಾಲಘಟ್ಟದಲ್ಲಿ ಎಂ.ಕೆ.ಶಿವನಂಜಪ್ಪ ಅವರು ಸಂಸದರಾಗಿ ಕೆಲಸ ಮಾಡಿದವರು. ಮಂಡ್ಯದಲ್ಲಿ ಏನೇನು ಗುರುತಿಸುತ್ತಿರೋ ಎಲ್ಲದರ ಹಿನ್ನೆಲೆಯಲ್ಲಿ ಶಿವನಂಜಪ್ಪ ಇದ್ದರು. ಸಾರ್ವಜನಿಕ ಬದುಕಿನಲ್ಲಿ ಅಂಜಿಕೆ ಹಾಗೂ ನಾಚಿಕೆ ಎರಡು ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಸಾರ್ವಜನಿಕ ರಾಜಕೀಯ ಇಟ್ಟುಕೊಂಡು ದೀರ್ಘಕಾಲದ ರಾಜಕೀಯ ಮಾಡಿರುವ ಇತಿಹಾಸ ಮಂಡ್ಯದಲ್ಲಿದೆ ಎಂದು ಹೇಳಿದರು.
ಪಕ್ಷ ಯಾವುದಾದರೂ ಇರಲಿ ಮಂಡ್ಯಕ್ಕೆ ಒಳ್ಳೆಯದಾಗಬೇಕು ಎಂದಾಗ ಎಲ್ಲ ಪಕ್ಷದವರು ಒಂದಾಗುತ್ತಿದ್ದ ರಾಜಕೀಯ ಪರಂಪರೆ ಮಂಡ್ಯ ಜಿಲ್ಲೆಯಲ್ಲಿತ್ತು. ಎಲ್ಲ ರಾಜಕಾರಣಿಗಳನ್ನು ಪಕ್ಷಾತೀತವಾಗಿ ಒಂದೇ ವೇದಿಕೆಗೆ ಕರೆತರುವ ಸಾಧ್ಯತೆ ಇತ್ತು. ಆದರೆ ಇತ್ತೀಚೆಗೆ ಅದು ಕಡಿಮೆಯಾಗುತ್ತಿದೆ. ಎಂ.ಕೆ.ಶಿವನಂಜಪ್ಪ ಕುಟುಂಬ ಎಂದಿಗೂ ಜನಸಾಮಾನ್ಯರಿಂದ ದೂರ ಆಗಲಿಲ್ಲ. ಅವರ ಜತೆ ಇದ್ದುಕೊಂಡು ದುಃಖ ದುಮ್ಮಾನಗಳಿಗೆ ಕಾರ್ಯೋನ್ಮುಖರಾಗಿ ಕೆಲಸ ಮಾಡಿರುವ ಕೀರ್ತಿ ಸಲ್ಲುತ್ತದೆ ಎಂದು ಹೇಳಿದರು.
ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಎಂ.ಕೆ.ಶಿವನಂಜಪ್ಪ ಅವರು ನಾಲ್ಕು ಅವಧಿಗೆ ಸಂಸದರಾಗಿ ಆಯ್ಕೆಯಾಗುವ ಮೂಲಕ ಜಿಲ್ಲೆಯ ಅಭ್ಯುದಯದ ಬಗ್ಗೆ ಒಳ್ಳೆತನ ರೂಡಿಸಿಕೊಂಡು ಬಂದಿದ್ದವರು. ಈಗಾಗಲೇ ನೀನಾಸಂ ನಾಟಕಗಳ ಮೂಲಕ ರಾಜಶೇಖರ ಕೋಟಿ, ಗೌರಿ ಲಂಕೇಶ್, ಎಸ್.ಪುಟ್ಟಣ್ಣಯ್ಯ ಅವರಿಗೆ ರಂಗನಮನ ಕಾರ್ಯಕ್ರಮ ಸಲ್ಲಿಸಲಾಗಿದೆ ಎಂದು ಹೇಳಿದರು.
ನಿವೃತ್ತ ಹಿರಿಯ ಪರಿಸರ ಅಧಿಕಾರಿ ಡಾ.ಬಿ.ಎಂ.ಪ್ರಕಾಶ್, ಸಂಘದ ಉಪಾಧ್ಯಕ್ಷ ಲಿಂಗಪ್ಪ ಚನ್ನನಕೆರೆ, ಕಾರ್ಯದರ್ಶಿ ನಂಜುಂಡಸ್ವಾಮಿ, ಎಂ.ವಿನಯ್‌ಕುಮಾರ್ ಇತರರಿದ್ದರು. ಇದೇ ವೇಳೆ ನೀನಾಸಂ ತಂಡ ಪ್ರದರ್ಶಿಸಿದ ಮಾಲತಿ ಮಾಧವ ನಾಟಕ ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು.