

ಮಂಡ್ಯ: ಇತ್ತೀಚೆಗೆ ಸಮಾಜ ಕಲುಷಿತವಾಗುತ್ತಿದ್ದು, ಈಗಿನ ಮಕ್ಕಳ ಹವ್ಯಾಸಗಳೂ ಕಲುಷಿತಗೊಳ್ಳುತ್ತಿವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಬೇಸರ ವ್ಯಕ್ತಪಡಿಸಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಬಹುಮುಖ ಪ್ರತಿಭೆ ಕೆ.ಪಿ.ಸ್ವಾಮಿ ಅವರ ಪೌರಾಣಿಕ ನಾಟಕ ಸಂಪುಟವಾದ ‘ರಂಗಕುಸುಮ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಹಿಂದೆ ಮಂಡ್ಯ ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ನೋಡಿದರೂ ಶಾಲೆಗಳ ರೀತಿಯಲ್ಲಿ ನಾಟಕಗಳನ್ನು ಕಲಿಸುತ್ತಿದ್ದರು. ಈಗ ಆ ಸನ್ನಿವೇಶಗಳಿಲ್ಲ. ಆಧುನಿಕತೆಯಲ್ಲಿ ಕಲುಷಿತವಾಗುತ್ತಿರುವ ಹವ್ಯಾಸಗಳು ಮಕ್ಕಳ ಭವಿಷ್ಯವನ್ನು ಬೇರೆಲ್ಲಿಗೋ ಕೊಂಡೊಯ್ಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಕೆ.ಪಿ.ಸ್ವಾಮಿ ಅವರು ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ರಂಗಭೂಮಿ ಕ್ಷೇತ್ರಗಳಲ್ಲಿ ಅನನ್ಯವಾದ ಕೊಡುಗೆ ನೀಡಿದ್ದಾರೆ. ಸ್ವಾಮಿ ಅವರು ಈಗಾಗಲೇ ಸಾಕಷ್ಟು ಸಾಹಿತ್ಯ ಕೃಷಿ ಮಾಡಿದ್ದಾರೆ. ಅವರ ಸೂರ್ಯಕಲ್ಯಾಣ, ಸ್ವರ್ಗಸಿಂಹಾಸನ, ಶ್ರೀ ಕ್ಷೇತ್ರ ಚಿಕ್ಕಲ್ಲೂರು ಸಿದ್ದಪ್ಪಾಜಿ ಮಹಾತ್ಮೆ ಸೇರಿದಂತೆ 22 ಪೌರಾಣಿಕ ಹಿನ್ನೆಲೆಯ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಶ್ರೀ ಘನನೀಲ ಸಿದ್ದಪ್ಪಾಜಿ ಸುಪ್ರಭಾತ, ಘನನೀಲ ಸಿದ್ದಪ್ಪಾಜಿ ಅಷ್ಟೋತ್ತರ, ಶ್ರೀಗಂಧದ ಚಿಗುರು ಸೇರಿದಂತೆ ಐದು ಧಾರ್ಮಿಕ ಕೃತಿಗಳು, ಅಲ್ಲದೆ ಭಾಮಿನಿ ಷಟ್ಪದಿ ಮಹಾಕಾವ್ಯ ರೂಪದಲ್ಲಿ ರಚಿಸಿರುವ ‘ಶ್ರೀ ಸಿದ್ದಪ್ಪಾಜಿ ಮಹಿಮಾ ವಿಲಾಸ’ ಅತ್ಯಂತ ಸೊಗಸಾಗಿ ಮೂಡಿಬಂದಿದೆ ಎಂದರು.
ಅನೇಕ ಭಕ್ತಿ ಗೀತೆಗಳು ಧ್ವನಿಸುರಳಿ ರೂಪದಲ್ಲಿ ಹೊರಬಂದಿದ್ದು, ಇವರು ಸಾಹಿತ್ಯ ಕೃತಿ ರಚನೆಗಷ್ಟೇ ಸೀಮಿತರಾಗದೆ ರಂಗಭೂಮಿಯಲ್ಲಿ ಆಸಕ್ತರಾಗಿ ಹಲವು ನಾಟಕಗಳಲ್ಲಿ ಪಾತ್ರವನ್ನು ಮಾಡಿದ್ದಾರೆ. ಸ್ನೇಹ ಕಿರೀಟಿ ಕರ್ಣ ನಾಟಕವು 2008ರಲ್ಲಿ ಮಂಡ್ಯದಲ್ಲಿ ನಡೆದ ಅಖಿಲ ಕರ್ನಾಟಕ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ನಾಟಕ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ಕೆ.ಪಿ.ಸ್ವಾಮಿ ಅವರ ಸಾಹಿತ್ಯಿಕ ಶ್ರೀಮಂತಿಕೆ ಹಾಗೂ ಪ್ರತಿಭೆಗೆ ಸಾಕ್ಷಿಯಾಗಿದೆ. ಅವರು ಇದೀಗ 600 ಪುಟಗಳ 12 ನಾಟಕಗಳ ಸಂಪುಟ ಹೊಂದಿರುವ ರಂಗ ಕುಸುಮ ಪುಸ್ತಕವನ್ನು ಹೊರ ತಂದಿದ್ದು, ರಂಗಭೂಮಿಯ ವೈವಿಧ್ಯಮಯ ಪ್ರಯೋಗಕ್ಕೆ ಇದನ್ನು ಅರ್ಪಿಸಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.
ರಂಗಕುಸುಮ ಪುಸ್ತಕದ ಕುರಿತು ಮಾತನಾಡಿದ ವಿಮರ್ಶಕ ಡಾ.ಸಿ.ನಾಗಣ್ಣ, ನಮ್ಮ ಸಾಮಾಜಿಕ ಮತ್ತು ವೈಯಕ್ತಿಕ ಕಷ್ಟ, ಸಂಕಷ್ಟ ಸಂವೇದನೆಗಳಿಗೆ ಪೌರಾಣಿಕ ನಾಟಕಗಳ ಪಾತ್ರಗಳು ಸಾಂತ್ವನ ಹೇಳುವ ಸಾಮರ್ಥ್ಯ ಹೊಂದಿವೆ. ಇಂದಿಗೂ ಕೂಡ ಪೌರಾಣಿಕ ನಾಟಕದ ಕಲೆ ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿದೆ. ಈ ಕಲೆಯನ್ನು ಜನಮಾನಸದಿಂದ ದೂರವಿಡಲು ಸಾಧ್ಯವಿಲ್ಲ. ಪೌರಾಣಿಕ ನಾಟಕಗಳ ಪಾತ್ರಗಳಾದ ಕೌರವ, ಪಾಂಡವ, ರಾಮ, ಲಂಕಾಧೀಶ ಮುಂತಾದ ಪಾತ್ರಗಳು ನಮ್ಮ ಸಮಾಜದ ಜನಜೀವನದಲ್ಲಿ ಹಾಸು ಹೊಕ್ಕಾಗಿವೆ. ಕೃತಿಯ ಕರ್ತೃ ಕೆ.ಪಿ.ಸ್ವಾಮಿಯವರು ರಂಗಭೂಮಿ ಸಾಹಿತ್ಯದಲ್ಲಿ ನಡೆಸಿರುವ ಕುಸುರಿ ಕೆಲಸ ಅತ್ಯಂತ ಮನೋಜ್ಞವಾಗಿ ಮೂಡಿ ಬಂದಿದೆ ಎಂದು ಬಣ್ಣಿಸಿದರು.
ಮಾಜಿ ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಪಿ.ಸ್ವಾಮಿ, ಲೋಕೇಶ್ ಚಂದಗಾಲು ಉಪಸ್ಥಿತರಿದ್ದರು. ಇದೇ ವೇಳೆ ರಂಗ ಕಲಾವಿದರಾದ ಲಕ್ಷ್ಮಯ್ಯ, ಬಿ.ವೆಂಕಟ, ಅಪ್ಪಾಜಿಗೌಡ, ಸಿ.ದೊಡ್ಡಣ್ಣಚಾರ್, ಕೆ.ಜಯರಾಂ, ಪುಸ್ತಕ ಪ್ರಕಾಶಕ ಆನಂದ ಕೊರಟಿ, ಅಶೋಕ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.