

ಭದ್ರಾವತಿ: ದೃಶ್ಯದ ಮಾತುಗಳ ಮೂಲಕ ಅದೃಶ್ಯವನ್ನು ಕಾಣಿಸುವ, ಪರಿಚಿತ ಜಗತ್ತಿನ ಮೂಲಕ ಅಪರಿಚಿತ ಜಗತ್ತನ್ನು ಪರಿಚಯಿಸುವ ಮರ್ಮ ಅರಿಯುವುದೆ ಎಲ್ಲ ಕಲೆಗಳಿಗೂ ಒಂದು ಸವಾಲಾಗಿದೆ. ಈ ಪ್ರಯತ್ನವನ್ನು ಹೆಜ್ಜೆ ತಂಡ ಯಶಸ್ವಿಯಾಗಿ ಮಾಡಿದೆ ಎಂದು ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ. ಬಿ.ಜಿ.ಧನಂಜಯ್ ಹೇಳಿದರು.
ನಗತರದ ಬಂಟರ ಭವನದಲ್ಲಿ ಶನಿವಾರ ಸಂಜೆ ಹೆಜ್ಜೆ ತಂಡ ಆಯೋಜಿಸಿದ್ದ ವೃಷಾಲಿ ರಂಗಕಾವ್ಯ ವಾಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜ ಹಾಗೂ ನಮ್ಮ ನಡುವಿನ ತಲ್ಲಣಗಳನ್ನು ಕಲೆಯ ಮೂಲಕ ಅಭಿವ್ಯಕ್ತಗೊಳಿಸುವ ಮಾಧ್ಯಮವೇ ರಂಗಕಾವ್ಯ. ತುಂಬು ಪ್ರೇಮದಂತಿರುವ ರಂಗಭೂಮಿಯಲ್ಲಿ ಕಲಾವಿದರು ಅತ್ಯಂತ ಕಡಿಮೆ ಕಾಲಾವಧಿಯಲ್ಲಿ ಹೆಚ್ಚು ಸಂಗತಿಗಳನ್ನು ಚರ್ಚಿಸುವ ಒಂದು ವಿಶಿಷ್ಟ ಕಲೆಗಳ ಸಮಾಗಮವಾಗಿ ರಂಗಕಾವ್ಯ ವಾಚನ ಹೊರತಂದಿದ್ದಾರೆ ಎಂದರು.
ಪೌರಾಣಿಕ ವಿಷಯಕ್ಕೆ ಸಾಮಾಜಿಕ ಸ್ಪರ್ಶವನ್ನು ನೀಡಿ, ಆಧುನಿಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವಲ್ಲಿ ಹೆಜ್ಜೆ ತಂಡ ಯಶಸ್ವಿಯಾಗಿದೆ. ಭ್ರೂಣ ಹತ್ಯೆ, ಬಹುಪತಿತ್ವ, ಲಿಂಗ ತಾರತಮ್ಯದ ವಿರುದ್ಧ ಜಾಗೃತಿ ಮೂಡಿಸಲಾಗಿದ್ದು ವೃಷಾಲಿ ಕರ್ಣನ ಪತ್ನಿಯಾಗಿ ಅನುಭವಿಸಿದ ನೋವು, ಹತಾಶೆ, ಅವಮಾನಗಳನ್ನು ಅರ್ಥಪೂರ್ಣವಾಗಿ ತೆರೆಯ ಮೇಲೆ ಕಾವ್ಯದ ಮೂಲಕ ಪರಿಚಯಿಸಿರುವುದು ನಿಜಕ್ಕೂ ಉತ್ತಮ ಪ್ರಯತ್ನ ಎಂದರು.
ಪದ್ಮಶ್ರೀ ಗೋವಿಂದರಾಜ್ ರಚಿಸಿದ್ದ ರಂಗಕಾವ್ಯವನ್ನು ನಂದಿನಿ ಮಲ್ಲಿಕಾರ್ಜುನ್ ಹಾಗೂ ಸುಧಾ ಶಿವಕುಮಾರ್ ವಾಚಿಸಿದರು. ಗಾಯಕಿಯರಾಗಿ ಶಾರದಾ ಶ್ರೀನಿವಾಸ್, ವೀಣಾ ಲೋಕನಾಥ್ ದನಿಗೂಡಿಸಿದರು/ ಯಶೋದಾ ವೀರಭದ್ರಪ್ಪ. ರಂಗಕರ್ಮಿ ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ, ಕವಿ ಡಾ. ವಾಸುದೇವ ನಾಡಿಗ್, ಬಂಟರ ಸಂಘದ ಪ್ರಕಾಶ್‌ಶೇಟ್ ಇತರರಿದ್ದರು.