

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ನಾಟಕ ಪ್ರದರ್ಶನ ನಡೆಸಿದ ಮಕ್ಕಳ ಪಾಲಕರನ್ನು ಬಂಧಿಸಿರುವುದನ್ನು ವಿರೋಧಿಸಿ ರಂಗಕರ್ಮಿ ಪ್ರಸನ್ನ ನೇತೃತ್ವದ ತಂಡ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಗೆ ತೆರಳಿ ದಿಢೀರ್ ಪ್ರತಿಭಟನೆ ನಡೆಸಿತು.
ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಪಡೆಯಬೇಕು. ಆದರೆ ತಂಡ ಅನುಮತಿ ಪಡೆಯದೆ ದಿಢೀರ್ ಪ್ರತಿಭಟನೆ ನಡೆಸಿದೆ.
ತಂಡ 5 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿತು.
ಕಲಬುರಗಿಯ ಶಾಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಚನೆ ಮಾಡಿದ ನಾಟಕವನ್ನು ಪ್ರದರ್ಶನ ನೀಡಿದ ಮಕ್ಕಳು, ಪೋಷಕರು ಹಾಗೂ ಶಿಕ್ಷಕರನ್ನು ಬಂಧಿಸಿದ್ದು ಸರಿಯಲ್ಲ. ವಿಚಾರಣೆ ನೆಪದಲ್ಲಿ ಮಕ್ಕಳಿಗೆ ಕಿರುಕುಳ ನೀಡಲಾಗಿದೆ. ಹತ್ತು ವರ್ಷದೊಳಗಿನ ಮಕ್ಕಳ ನಾಟಕ ಪ್ರದರ್ಶನಕ್ಕೆ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದು ಸರಿಯಲ್ಲ.
ವಿನಾ ಕಾರಣ ಶಿಕ್ಷಕರನ್ನು ಹಾಗೂ ಪೋಷಕರನ್ನು ಬಂಧಿಸಿರುವ ಉದ್ದೇಶ ತಿಳಿಸಬೇಕು. ಮಕ್ಕಳು ಪ್ರದರ್ಶಿಸಿದ ನಾಟಕ ದೇಶದ್ರೋಹವೇ ಎಂದು ತಿಳಿಸಬೇಕು ಎಂದು ಪ್ರತಿಭಟನೆ ನಡೆಸಿದ ತಂಡ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ ಸಲ್ಲಿಸಿದೆ.
ಗುಲ್ಬರ್ಗದಲ್ಲಿ ಇತ್ತೀಚೆಗೆ ಶಾಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಅನಾಹುತ ಆಗುತ್ತದೆ ಎಂದು ಬಿಂಬಿಸಿ ರಚಿಸಿದ್ದ ನಾಟಕವನ್ನು ಮಕ್ಕಳು ಪ್ರದರ್ಶಸಿದ್ದರು.ನಾಟಕ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದ ಶಾಲೆ, ಶಿಕ್ಷಕರು, ಮಕ್ಕಳು ಹಾಗೂ ಪಾಲಕರ ಮೇಲೆ ಪೊಲೀಸರು ದೇಶ ದ್ರೋಹ ಕಾಯ್ದೆ ಅಡಿ ದೂರು ದಾಖಲಿಸಿದ್ದರು. (ದಿಗ್ವಿಜಯ ನ್ಯೂಸ್)