

ವಿಜಯವಾಣಿ ಸುದ್ದಿಜಾಲ ಉಡುಪಿ
ರಾಜ್ಯದ ಕಲೆ, ಸಂಸ್ಕೃತಿ, ಶಿಕ್ಷಣ, ವೈದ್ಯಕೀಯ, ಔದ್ಯೋಗಿಕ ಕ್ಷೇತ್ರಕ್ಕೆ ಉಡುಪಿ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಸಾಂಸ್ಕೃತಿಕ ಕೇಂದ್ರವಾಗಿಯೂ ಹೆಗ್ಗುರುತು ಮೂಡಿಸುತ್ತಿರುವ ಉಡುಪಿ ಜಿಲ್ಲೆಯು ಸಾಂಸ್ಕೃತಿಕ ರಾಜಧಾನಿ ಖ್ಯಾತಿಯ ಮೈಸೂರಿಗೆ ಸರಿಸಮನಾಗಿ ಬೆಳೆಯುತ್ತಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ ಭಟ್ ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಂಗಭೂಮಿ ಉಡುಪಿ ವತಿಯಿಂದ ದಿ.ಕುತ್ಪಾಡಿ ಆನಂದ ಗಾಣಿಗರ ಸ್ಮರಣಾರ್ಥ ಮೇ 4ರಂದು ರಾತ್ರಿ ಆಯೋಜಿಸಿದ್ದ ರಂಗಭೂಮಿ ಆನಂದೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಿತ ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ ಸಂಸ್ಕೃತಿ ಸಾಧಕ ಪ್ರಶಸ್ತಿಯನ್ನು ಡಾ. ಟಿಎಂಎ ಪೈ ಪ್ರತಿಷ್ಠಾನದ ಅಧ್ಯಕ್ಷ ಟಿ.ಅಶೋಕ ಪೈ ಅವರಿಗೆ ಪ್ರದಾನ ಮಾಡಲಾಯಿತು.
ಶಾರದಾ ರೆಸಿಡೆನ್ಶಿಯಲ್ ಸ್ಕೂಲ್ನ ವಿದ್ಯಾವಂತ ಆಚಾರ್ಯ ಅಭಿನಂದನಾ ಮಾತುಗಳನ್ನಾಡಿದರು. ತಲ್ಲೂರು ಫ್ಯಾಮಿಲಿ ಟ್ರಸ್ಟ್, ರಂಗಭೂಮಿ ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ತಲ್ಲೂರು ಟ್ರಸ್ಟ್ನ ಗಿರಿಜಾ ಶಿವರಾಮ ಶೆಟ್ಟಿ, ಜಿಲ್ಲಾ ಸೋಮಕ್ಷತ್ರೀಯ ಗಾಣಿಗ ಸಮಾಜದ ಅಧ್ಯಕ್ಷ ಉದಯ ಕೆ., ಉದ್ಯಮಿ ಪುರುಷೋತ್ತಮ ಶೆಟ್ಟಿ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ರಂಗಭೂಮಿ ಸಂಸ್ಥೆಯ ಉಪಾಧ್ಯಕ್ಷರಾದ ಭಾಸ್ಕರ ರಾವ್ ಕಿದಿಯೂರು, ಎನ್.ರಾಜಗೋಪಾಲ ಬಲ್ಲಾಳ ಉಪಸ್ಥಿತರಿದ್ದರು.
ರಂಗಭೂಮಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ಚಂದ್ರ ಕುತ್ಪಾಡಿ ಸ್ವಾಗತಿಸಿದರು. ಡಾ.ವಿಷ್ಣುಮೂರ್ತಿ ಪ್ರಭು ವಂದಿಸಿದರು. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಆಯನ ನಾಟಕ ಮನೆ ಮಂಗಳೂರು ತಂಡದಿಂದ ಅಶ್ವತ್ಥಾಮ ನಾಟಕ ಪ್ರದರ್ಶನಗೊಂಡಿತು.
ರಂಗಭೂಮಿ ಉಡುಪಿ ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಲು ಹಲವಾರು ಅವಕಾಶಗಳಿವೆ. ವಿದೇಶಿ ಫಂಡಿಂಗ್ಗಳ ಮೂಲಕ ಕಲೆ ಹಾಗೂ ಕಲಾವಿದರನ್ನು ಬೆಳೆಸುವ ನಿಟ್ಟಿನಲ್ಲಿ ರಂಗಭೂಮಿ ಮುಂದಾಗಬೇಕು. | ಟಿ.ಅಶೋಕ ಪೈ. ಡಾ. ಟಿಎಂಎ ಪೈ ಪ್ರತಿಷ್ಠಾನದ ಅಧ್ಯಕ್ಷ