ಮಕ್ಕಳ ರಂಗ ಚಟುವಟಿಕೆಗಳಿಗೆ ಹೆತ್ತವರ ಪ್ರೋತ್ಸಾಹ ಅಗತ್ಯ

udp-21-ambalpadi
Published on

ಉಡುಪಿ: ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸಲು, ಸಾಮಾಜಿಕ ಮೌಲ್ಯಗಳನ್ನು ಉತ್ತೇಜಿಸಲು ರಂಗ ಚಟುವಟಿಕೆಗಳು ಅಗತ್ಯಗತ್ಯವಾಗಿದ್ದು, ರಂಗಶಿಕ್ಷಣ ಪಡೆಯಲು ಮಕ್ಕಳಿಗೆ ಹೆತ್ತವರು ಪ್ರೋತ್ಸಾಹ ನೀಡಬೇಕು ಎಂದು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ಎನ್​.ಬಿ.ವಿಜಯ ಬಲ್ಲಾಳ್​ ಹೇಳಿದರು.

ಭಾನುವಾರ ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ಏ.12ರಿಂದ 20ರವರೆಗೆ ನಡೆದ ರಂಗ ತರಬೇತಿ ಶಿಬಿರ ಸಮಾರೋಪದಲ್ಲಿ ಮಾತನಾಡಿದರು.

ಶಿಬಿರದ ನಿರ್ದೇಶಕ ವಿದ್ದು ಉಚ್ಚಿಲ್​ ಮಾತನಾಡಿ, ಮಕ್ಕಳಿಗೆ ಯಾವುದೇ ಒತ್ತಡ ಹಾಕದೆ, ಅವರೊಂದಿಗೆ ಬೆರೆತು ಅವರಲ್ಲಿರುವ ಪ್ರತಿಭೆಯನ್ನು ಹೊರತರಲು ಪ್ರಯತ್ನಿಸಿದ್ದೇವೆ. ಧಾರ್ಮಿಕ ಕ್ಷೇತ್ರಗಳು ಇಂತಹ ಕಾರ್ಯಗಳಿಗೆ ಪ್ರೋತ್ಸಾಹ ನೀಡಿದರೆ ರಂಗಭೂಮಿಗೆ ಹೆಚ್ಚಿನ ಬಲ ತುಂಬಿದಂತಾಗುತ್ತದೆ ಎಂದರು.

ರಂಗಭೂಮಿ ಪ್ರಧಾನ ಕಾರ್ಯದರ್ಶಿ ಪ್ರದಿಪ್​ಚಂದ್ರ ಕುತ್ಪಾಡಿ ಪ್ರಾಸ್ತಾವಿಕ ಮಾತನಾಡಿ, ಮಕ್ಕಳ ಮನಸ್ಸು ಖಾಲಿ ಹಾಳೆಯಿದ್ದಂತೆ. ಹೀಗಾಗಿ ಅವರಿಗೆ ಸರಿಯಾದ ತಿಳುವಳಿಕೆ, ಜ್ಞಾನ ಕೊಡಬೇಕಾಗುತ್ತದೆ. ಯಾವುದೇ ಜಾತಿ, ಮತ, ಪಂಥದ ಹಂಗಿಲ್ಲದೆ ಕೇವಲ ನಾಟಕ, ರಂಗಭೂಮಿ ಚಟುವಟಿಕೆ ಕಲಿಸಲಾಗುತ್ತದೆ. ಈ ಮೂಲಕ ರಂಗಭೂಮಿಯ ಮುಂದಿನ ತಲೆಮಾರನ್ನು ಸೃಷ್ಟಿಸುವ ಉದ್ದೇಶಹೊಂದಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಶಿಬಿರದ ರಂಗನಿರ್ದೇಶಕ ವಿದ್ದು ಉಚ್ಚಿಲ್​ ಅವರನ್ನು ಸನ್ಮಾನಿಸಲಾಯಿತು. ಅಮಿತಾಂಜಲಿ ಕಿರಣ್​ ಕಾರ್ಯಕ್ರಮ ನಿರೂಪಿಸಿದರು.

ಪ್ರೌಢಶಾಲಾ ಮಕ್ಕಳಿಗೆ ಹಮ್ಮಿಕೊಂಡ ರಂಗ ಶಿಕ್ಷಣ ಯೋಜನೆಗೆ ಶಿಕ್ಷಣ ಸಂಸ್ಥೆಗಳಿಂದ ಅಭೂತಪೂರ್ವ ಬೆಂಬಲ ದೊರೆತಿದೆ. ಈ ವರ್ಷ ಯೋಜನೆಯನ್ನು ಸುಮಾರು 20 ಶಾಲೆಗಳಿಗೆ ವಿಸ್ತರಿಸಲು ಚಿಂತನೆ ನಡೆದಿದೆ. ಪೋಷಕರು ತಮ್ಮ ಮಕ್ಕಳಿಗೆ ರಂಗ ಶಿಕ್ಷಣ, ಯಕ್ಷಗಾನ, ಜಾನಪದ ಮೊದಲಾದ ಕೌಶಲಗಳನ್ನು ಕಲಿಯಲು ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಡಾ.ತಲ್ಲೂರು ಶಿವರಾಮ ಶೆಟ್ಟಿ, ಅಧ್ಯಕ್ಷರು, ರಂಗಭೂಮಿ ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net