

ಅವಿನಾಶ್ ಜೈನಹಳ್ಳಿ ಮೈಸೂರು
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಡಿ.8 ರಿಂದ 15 ರವರೆಗೆ ನಡೆಯುವ ರಂಗಾಸಕ್ತರ ಹಬ್ಬ ‘ಬಹುರೂಪಿ ರಾಷ್ಟ್ರೀಯ ರಂಗೋತ್ಸವ’ಕ್ಕೆ ರಂಗಾಯಣದ ಅಂಗಳದಲ್ಲಿ ಸಿದ್ಧತೆ ಭರದಿಂದ ಸಾಗಿದೆ.
ಒಂದು ವಾರಕಾಲ ‘ಕಲಾರಸ’ ಹಂಚಲು ರಂಗಾಯಣದ ಆವರಣ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ವೇದಿಕೆಗಳ ವಿನ್ಯಾಸ, ಆವರಣ ಸ್ವಚ್ಛತಾ ಕಾರ್ಯ, ನಾಟಕಗಳ ತಾಲೀಮು, ಮಳಿಗೆಗಳ ನಿರ್ಮಾಣ, ಚಿತ್ರಕಲಾ ಶಿಬಿರ… ಹೀಗೆ ಸಕಲ ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿವೆ. ‘ಭಾರತೀಯತೆ’ ಎಂಬ ಪರಿಕಲ್ಪನೆಯ ಅಡಿಯಲ್ಲಿ ನಾಟಕಗಳು ಸೇರಿದಂತೆ ಜಾನಪದ ಕಲಾಪ್ರದರ್ಶನ, ರಾಷ್ಟ್ರೀಯ ಚಲನಚಿತ್ರೋತ್ಸವ, ವಿಚಾರ ಸಂಕಿರಣ, ಪುಸ್ತಕ ಪ್ರದರ್ಶನ, ಕರಕುಶಲ ವಸ್ತುಪ್ರದರ್ಶನ, ದೇಸಿ ಆಹಾರ ಮೇಳ ಮತ್ತು ಪ್ರಾತ್ಯಕ್ಷಿಕೆಗಳು, ಚಿತ್ರಕಲಾ ಶಿಬಿರ ಒಳಗೊಂಡಂತೆ ರಂಗೋತ್ಸವವನ್ನು ರೂಪಿಸಲಾಗಿದೆ.
ಆಹಾರ, ತಿನಿಸು, ಕರಕುಶಲ ವಸ್ತುಗಳು, ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಸಿದ್ಧವಾಗುತ್ತಿವೆ. ರಂಗ ವಿನ್ಯಾಸಕ ದ್ವಾರಕನಾಥ್ ನೇತೃತ್ವದಲ್ಲಿ ಹತ್ತಾರು ಕಲಾವಿದರು ‘ಭಾರತೀಯತೆ’ ಪರಿಕಲ್ಪನೆ ಅಡಿಯಲ್ಲಿ ‘ಬಹುರೂಪಿ’ ಪೋಸ್ಟರ್ ಹಾಗೂ ಭಿತ್ತಿಚಿತ್ರಗಳನ್ನು ತಯಾರು ಮಾಡುತ್ತಿದ್ದಾರೆ. ಜತೆಗೆ, ಕಾರ್ಯಕ್ರಮ ನಡೆಯಲಿರುವ ವೇದಿಕೆಗಳನ್ನು ಸಿದ್ಧ ಮಾಡುತ್ತಿದ್ದಾರೆ. ಪೋಸ್ಟರ್ ಹಾಗೂ ಭಿತ್ತಿಚಿತ್ರಗಳನ್ನು ರಂಗಾಯಣ ಅಂಗಳದ ಎಲ್ಲೆಡೆ ಅಳವಡಿಸಲಾಗುತ್ತದೆ. ಒಟ್ಟಾರೆ ರಂಗಾಯಣ ಅಂಗಳದ ತುಂಬ ‘ರಂಗ ಸಂಭ್ರಮ’ ಮನೆ ಮಾಡಿದೆ.
60 ಮಳಿಗೆಗಳಿಗೆ ಸಿದ್ಧತೆ:
ಆಹಾರ, ತಿನಿಸು, ಕರಕುಶಲ ವಸ್ತುಗಳು, ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ 60 ಮಳಿಗೆಗಳು ತಲೆ ಎತ್ತುತ್ತಿವೆ. ದೇಶದ ನಾನಾ ಭಾಗಗಳಿಂದ ಕರಕುಶಲ ಕರ್ಮಿಗಳು ಭಾಗವಹಿಸಲಿದ್ದಾರೆ. ಈ ಪೈಕಿ ಕರಕುಶಲ ವಸ್ತುಗಳು ಮತ್ತು ಬಟ್ಟೆಗಳಿಗಾಗಿ 15 ಮಳಿಗೆ, ದೇಸಿ ಆಹಾರಕ್ಕಾಗಿ 15ಕ್ಕೂ ಹೆಚ್ಚಿನ ಮಳಿಗೆಗಳನ್ನು ಸಿದ್ಧಪಡಿಸಲಾಗಿದೆ. ಸಹಜ ಕೃಷಿ ಆಹಾರಗಳು, ಮೈಸೂರು ಶೈಲಿ, ಕೊಡಗು, ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಬಗೆ ಬಗೆಯ ವಿಶೇಷ ಆಹಾರ ಪದಾರ್ಥಗಳ ಘಮಲು ಹಂಚಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಶೇಷವಾಗಿ ಉತ್ತರ ಕನ್ನಡ ತಿನಿಸು ತೊಡದೇವು, ದಾವಣಗೆರೆ ಬೆಣ್ಣೆ ದೊಸೆ, ಗೋಕಾಕ್ ಕರದಂಟು, ಹಾಲು ಬಾಯಿ ಇರಲಿದೆ. ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕಾಗಿ 15 ಮಳಿಗೆಗಳಲ್ಲಿ ಸಿದ್ಧತೆ ಮಾಡಲಾಗುತ್ತಿದೆ.
ಕಲಾವಿದರು ಮತ್ತು ಗಣ್ಯರಿಗೆ ವ್ಯವಸ್ಥೆ:
ಪ್ರತಿದಿನ ಉತ್ಸವಕ್ಕೆ ಆಗಮಿಸುವ 200 ರಿಂದ 250 ಕಲಾವಿದರು, ಗಣ್ಯರಿಗಾಗಿ ನಗರದ ಖಾಸಗಿ ಹೋಟೆಲ್‌ಗಳು ಹಾಗೂ ಸರ್ಕಾರಿ ಅತಿಥಿಗೃಹಗಳನ್ನು ಕಾಯ್ದಿರಿಸಲಾಗಿದೆ. ಅತಿಥಿಗೃಹಗಳಿಂದ ರಂಗಾಯಣಕ್ಕೆ ಕರೆತರಲು ಬಸ್ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಚಿತ್ರಗಳ ಪ್ರದರ್ಶನ:
ಬಹುರೂಪಿ ಅಂಗವಾಗಿ ರಂಗಾಯಣದ ಅಂಗಳದಲ್ಲಿ ಒಂದು ವಾರ ಕಾಲ ಚಿತ್ರಕಲಾ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಕಾವಾ ಕಾಲೇಜಿನ 20 ಕಲಾವಿದರು ಭಾಗವಹಿಸಿದ್ದು, ‘ಭಾರತೀಯತೆ’ ಪರಿಕಲ್ಪನೆ ಅಡಿಯಲ್ಲಿ ಚಿತ್ರ ಬಿಡಿಸುತ್ತಿದ್ದಾರೆ. ಇವರು ಬಿಡಿಸಿದ ಚಿತ್ರಗಳನ್ನು ಕಲಾಮಂದಿರದ ಸುಚಿತ್ರ ಗ್ಯಾಲರಿಯಲ್ಲಿ ಪ್ರದರ್ಶನ ಮಾಡಲಾಗುತ್ತದೆ ಎಂದು ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ.
ಸಿದ್ಧಗೊಳ್ಳುತ್ತಿವೆ ವೇದಿಕೆಗಳು:
‘ಬಹುರೂಪಿ ರಾಷ್ಟ್ರೀಯ ರಂಗೋತ್ಸವ’ಕ್ಕೆ ರಂಗಾಯಣ ಅಂಗಳದ ಭೂಮಿಗೀತ, ವನರಂಗ, ಡಾ.ಪುನೀತ್ ರಾಜ್‌ಕುಮಾರ್(ಶ್ರೀರಂಗ) ಚಿತ್ರಮಂದಿರ, ಬಿ.ವಿ.ಕಾರಂತ ರಂಗಚಾವಡಿ ಹಾಗೂ ಕಲಾಮಂದಿರ, ಕಿರು ರಂಗಮಂದಿರಗಳಲ್ಲಿ ಸಿದ್ಧತೆ ಮಾಡಲಾಗುತ್ತಿದೆ. ಈ ಬಾರಿ ವನರಂಗದಲ್ಲಿ ಜನಪದೋತ್ಸವ ನಡೆಯಲಿದೆ. ಬಿ.ವಿ.ಕಾರಂತ ರಂಗ ಚಾವಡಿಯಲ್ಲಿ ‘ರಸ ಘಗಳಿಗೆಗಳು’ ಎಂಬ ಕಾರ್ಯಕ್ರಮ ನಡೆಯಲಿದೆ.
ನಾಟಕಗಳ ಟಿಕೆಟ್ ಭರ್ಜರಿ ಮಾರಾಟ!
ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ನಾಟಕಗಳ ಟಿಕೆಟ್ ಮಾರಾಟ ಆರಂಭವಾಗಿದ್ದು, ರಂಗಾಸಕ್ತರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ವಿಶೇಷವಾಗಿ ಭೂಮಿಗೀತ ರಂಗ ವೇದಿಕೆಯಲ್ಲಿ ಡಿ.9 ರಂದು ಸಂಜೆ 6.30ಕ್ಕೆ ನಡೆಯಲಿರುವ ‘ಟಿಪ್ಪು ನಿಜಕನಸುಗಳು’ ನಾಟಕದ ಎಲ್ಲ ಟಿಕೆಟ್‌ಗಳು ಖಾಲಿಯಾಗಿವೆ. ಉಳಿದಂತೆ ಸಂಸ್ಕೃತ ಭಾಷೆಯ ಕರ್ಣಭಾರಂ, ಕನ್ನಡದ ಲೀಲಾವತಿ, ಚಿದಂಬರ ರಹಸ್ಯ, ಕರಿಮಾಯಿ, ತುಳು ಭಾಷೆಯ ಕಾಪ ನಾಟಕಗಳ ಟಿಕೆಟ್‌ಗೂ ಬೇಡಿಕೆ ಹೆಚ್ಚಾಗಿದೆ.
ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ರಂಗಾಯಣದ ಅಂಗಳದಲ್ಲಿ ಸಿದ್ಧತೆ ಭರದಿಂದ ಸಾಗಿದೆ. ಕರಕುಶಲ ವಸ್ತುಗಳು, ಆಹಾರ, ತಿನಿಸು, ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ 60 ಮಳಿಗೆಗಳು ತಲೆ ಎತ್ತುತ್ತಿವೆ. ರಂಗ ವಿನ್ಯಾಸಕ ದ್ವಾರಕನಾಥ್ ನೇತೃತ್ವದಲ್ಲಿ ಹತ್ತಾರು ಕಲಾವಿದರು ಪೋಸ್ಟರ್, ಭಿತ್ತಿಚಿತ್ರಗಳನ್ನು ತಯಾರಿಸುತ್ತಿದ್ದಾರೆ. ಈ ಬಾರಿ ‘ಭಾರತೀಯತೆ’ ವಸ್ತುವಿಷಯದಡಿ ಉತ್ಸವ ನಡೆಯಲಿದೆ. ಭಾರತವೆಂದರೆ ಕೇವಲ ನೆಲವಲ್ಲ, ‘ಮಾತೆ’ ಎಂದು ಪೂಜಿಸುತ್ತೇವೆ. ಇದು ನಮ್ಮ ವ್ಯಕ್ತಿತ್ವದ ಹೆಗ್ಗುರುತು. ಇಲ್ಲಿರುವ ದೊಡ್ಡ ಜನಸಂಖ್ಯೆಯೇ ನಮ್ಮ ಅತಿದೊಡ್ಡ ಸಂಪನ್ಮೂಲ. ಅನೇಕ ಭಾಷೆ, ಧರ್ಮ, ಜಾತಿ ಜನಾಂಗಗಳ ಏಕಸಮೂಹವೇ ಭಾರತ.ಅಡ್ಡಂಡ ಸಿ.ಕಾರ್ಯಪ್ಪ, ರಂಗಾಯಣ ನಿರ್ದೇಶಕ