

ಕಟೀಲು: ಬಿ.ವಿ.ಕಾರಂತ, ಪು.ತಿ.ನ, ಸಿಂದೂವಳ್ಳಿ ಅನಂತಮೂರ್ತಿ, ಕೆಮ್ತೂರು ದೊಡ್ಡಣ್ಣ ಶೆಟ್ಟಿ ಮತ್ತಿತರ ಸಾಹಿತಿಗಳು ರಂಗಭೂಮಿಯನ್ನು ಬೆಳೆಸಿದವರು. ರಂಗಗೀತೆ ಮೂಲಕ ಸಾಹಿತ್ಯ, ಸಾಹಿತಿಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯ ಅಭಿನಂದನೀಯ ಎಂದು ಸಾಹಿತ್ಯಾಸಕ್ತ ಪಾಂಡುರಂಗ ಭಟ್ ಕಟೀಲು ಹೇಳಿದರು.
ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿಪೂರ್ವ ಕಾಲೇಜಿನಲ್ಲಿ ಮೂಲ್ಕಿ ತಾಲೂಕಿನ ಶಿಕ್ಷಣ ಸಂಸ್ಥೆಗಳ ಆಸಕ್ತ ವಿದ್ಯಾರ್ಥಿಗಳಿಗೆ ಮಂಗಳೂರಿನ ಜರ್ನಿ ಥಿಯೇಟರ್ ಗ್ರೂಪ್ ಕಲಾವಿದರಿಂದ ಆಯೋಜಿಸಿದ ರಂಗಗೀತೆಗಳ ಕಾರ್ಯಾಗಾರದಲ್ಲಿ ಮಾತನಾಡಿದರು.
ಸಾನ್ವಿ, ಮೇಘ, ಜಗತ್, ಶ್ರೀರಕ್ಷಾ ಅನುಭವ ಹಂಚಿಕೊಂಡರು. ಮೂಲ್ಕಿ ತಾಲೂಕಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದರು. ಪುತಿನ, ಬಿ.ವಿ.ಕಾರಂತ, ಎಚ್.ಎಸ್.ವೆಂಕಟೇಶಮೂರ್ತಿ ಮುಂತಾದ ಸಾಹಿತಿಗಳ ರಂಗಗೀತೆ, ಪುರಂದರದಾಸರ ಕೀರ್ತನೆಗಳನ್ನು ಕಲಿಸಲಾಯಿತು.
ಮೂಲ್ಕಿ ಕಸಾಪ ಅಧ್ಯಕ್ಷ ಮಿಥುನ್ ಕೊಡೆತ್ತೂರು, ಕಾರ್ಯದರ್ಶಿ ಹೆರಿಕ್ ಪಾಯಸ್, ಕಟೀಲು ಪ್ರೌಢ ಶಾಲೆ ಉಪಪ್ರಾಂಶುಪಾಲ ರಾಜಶೇಖರ್, ಜರ್ನಿ ಥೇಟರ್ನ ಶಶಾಂಕ್ ಐತಾಳ್, ಚಿನ್ಮಯಿ, ಮೇಘನಾ ಕುಂದಾಪುರ ಮತ್ತಿತರರಿದ್ದರು. ಉಪನ್ಯಾಸಕಿ ಶೈಲಜಾ ಕಾರ್ಯಕ್ರಮ ನಿರೂಪಿಸಿದರು. ತನುಜಾ ವಂದಿಸಿದರು.