ರಂಗಕಲೆಗೆ ಪ್ರೋತ್ಸಾಹ ನೀಡುತ್ತಿರುವುದು ಎಲ್ಲರಿಗೂ ಮಾದರಿ

Ranga Bhraram 3rd Day Drama Festival
Ranga Bhraram 3rd Day Drama Festival hosakote
Published on

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಯುವಜನತೆ ಮೊಬೈಲ್‌ನಲ್ಲಿ ಬರುವ ರೀಲ್ಸ್ ವೀಕ್ಷಿಸಲು ದಿನಗಳನ್ನೇ ವ್ಯಯಿಸುತ್ತಿರುವ ದಿನಮಾನಗಳಲ್ಲಿ ನಾಟಕ, ರಂಗಭೂಮಿ ಪ್ರೋತ್ಸಾಹಿಸುತ್ತಿರುವುದು ಸಂತಸದಾಯಕ ಬೆಳವಣಿಗೆ ಎಂದು ತಾಪಂ ಇಒ ವಸಂತಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಹೊರವಲಯದ ನಿಂಬೆಕಾಯಿಪುರದ ಜನಪದರು ರಂಗಮಂದಿರದಲ್ಲಿ ರಂಗಮಾಲೆ 75ರ ಅಮೃತ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ಜನಪದರು ಸಾಂಸ್ಕೃತಿಕ ವೇದಿಕೆಯಿಂದ ಹಮ್ಮಿಕೊಂಡಿದ್ದ ರಂಗಸಂಭ್ರಮ 3ನೇ ದಿನದ ನಾಟಕೋತ್ಸವದ ಸಮಾರೋಪದಲ್ಲಿ ಮಾತನಾಡಿದರು.
ಜನಪದರು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಪಾಪಣ್ಣ ಮಾತನಾಡಿ, ಈ ರಂಗ ಮಂದಿರ ನಿರ್ಮಾಣಕ್ಕೆ ಕಟ್ಟಡ ಕೂಲಿ ಕಾರ್ಮಿಕರು, ಮೇಸ್ತ್ರಿ, ಕಲಾವಿದರು, ಕಲಾ ಪ್ರೇಮಿಗಳು ಎಲ್ಲರೂ ಸಹಕಾರ ನೀಡಿದ್ದು, ಇಂದಿಗೂ ಜಾನಪದ ಕಲೆಗೆ ನೂರಾರು ಸಂಖ್ಯೆಯಲ್ಲಿ ಕಲಾ ಪ್ರೇಮಿಗಳು ಆಗಮಿಸಿ ಪ್ರೋತ್ಸಾಹಿಸಿರುವುದು ಕಲಾ ಆರಾಧಕರು ನಮ್ಮಗಳ ನಡುವೆ ಇದ್ದಾರೆ ಎಂಬುದನ್ನು ಸಾಬೀತು ಮಾಡಿದೆ ಎಂದರು.
ಇಲ್ಲಿ ನಾಟಕ ಪ್ರದರ್ಶನ ಯಶಸ್ವಿಗೊಳಿಸಿದ್ದು, ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹದ ಜತೆಗೆ ಹುಮ್ಮಸ್ಸನ್ನು ನೀಡಿದೆ. ಜತೆಗೆ ಈ ಜಾನಪದ ರಂಗಮಂದಿರದಲ್ಲಿ ಯಾವುದೇ ರಾಜಕೀಯ ಪ್ರವೇಶವಿಲ್ಲದೆ ಕಲೆಗೆ ಮಾತ್ರ ಪ್ರೋತ್ಸಾಹ ನೀಡುವ ಕೆಲಸ ಮಾಡಲಾಗುತ್ತಿದೆ. ರಾಜಕೀಯ ಕಾರ್ಯಕ್ರಮಗಳನ್ನು ಹೊರತುಪಡಿಸಿ ಕಲೆ ಸಂಸ್ಕೃತಿಗೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳನ್ನು ನಡೆಸಲು ಅನುವು ಮಾಡಿಕೊಡಲಾಗಿದೆ ಎಂದರು.
ರಾಮಕೃಷ್ಣ ಬೆಳತೂರ್ ನಿರ್ದೇಶನದ ಸೂಳೆ ಸಂಕವ್ವ ನಾಟಕ ಪ್ರದರ್ಶನ ನಡೆಯಿತು. ಜಾನಪದರು ರಂಗಮಂದಿರ ನಿರ್ಮಾಣಕ್ಕೆ ಸಹಕರಿಸಿದವರನ್ನು ಸನ್ಮಾನಿಸಲಾಯಿತು. ಜನಪದರು ಸಾಂಸ್ಕೃತಿಕ ವೇದಿಕೆ ಪ್ರಧಾನ ಕಾರ್ಯದರ್ಶಿ ಸಿದ್ದೇಶ್ವರ ನನಸು ಮನೆ, ಸಂಚಾಲಕ ಜಗದೀಶ್ ಕೆಂಗನಾಳ್, ಪದಾಧಿಕಾರಿಗಳಾದ ಮುನಿರಾಜ್, ಮಹೇಶ್, ಚಲಪತಿ, ಎಂ.ಸುರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net