ಕರೂರ ಗ್ರಾಮದ ಲಕ್ಷ್ಮೀ ಆತ್ಮಹತ್ಯೆಗೆ ಅಪರಿಚತ ಯುವಕ ಕಾರಣ; ಇನ್‌ಸ್ಟಾಗ್ರಾಮ್ ಗೆಳೆಯನ ವಿರುದ್ಧ ಪಾಲಕರ ಆರೋಪ

Published on

ರಾಣೆಬೆನ್ನೂರ: ತಾಲೂಕಿನ ಕರೂರ ಗ್ರಾಮದ ಅಜ್ಜಯ್ಯನ ದೇವಸ್ಥಾನದ ಬಳಿಯ ಸೇತುವೆ ಮೇಲಿಂದ ರೈಲ್ವೆ ಹಳಿ ಮೇಲೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯ ಸಾವಿಗೆ ಇನ್‌ಸ್ಟಾಗ್ರಾಮ್‌ನಿಂದ ಆಕೆಗೆ ಪರಿಚಯವಾಗಿದ್ದ ಅಪರಿಚಿತ ಯುವಕನೇ ಕಾರಣ ಎಂದು ಪಾಲಕರು ಆರೋಪಿಸಿದ್ದಾರೆ.
ಗ್ರಾಮದ ಲಕ್ಷ್ಮೀ ಬಸವರಾಜ ಎಲಿಗಾರ (19) ಮೃತಪಟ್ಟ ಯುವತಿ. ಈಕೆಗೆ ಇನ್‌ಸ್ಟಾಗ್ರಾಮ್ ಆ್ಯಪ್ ಮೂಲಕ 25 ವರ್ಷದ ಯುವಕನೊಬ್ಬ ಪರಿಚಯವಾಗಿದ್ದ. ಹೀಗೆ ಆಕೆಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತ, ಆಗಾಗ ಆಕೆಯ ಮನೆಗೆ ಬಂದು ಮಾತನಾಡಿಸುತ್ತಿದ್ದ. ಈ ವಿಷಯ ಪಾಲಕರಿಗೆ ಗೊತ್ತಾಗಿ ಮಗಳಿಗೆ ಬುದ್ದಿ ಹೇಳಿದ ಬಳಿಕ ಆಕೆ ಆತನೊಂದಿಗೆ ಮಾತು ಬಿಟ್ಟಿದ್ದ. ಇದಾದ ಬಳಿಕ ಯುವಕ ಯುವತಿಯ ಮನೆಯ ಬಳಿ ಬಂದು ಬೆದರಿಸಿದ್ದ. ಇದರಿಂದ ಬೇಸರಗೊಂಡ ಲಕ್ಷ್ಮೀ ಜೂ.20ರಂದು ನಸುಕಿನ ಜಾವ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸಾವಿಗೆ ಅಪರಿಚಿತ ಗೆಳೆಯನೇ ಕಾರಣವಾಗಿದ್ದು, ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ಲಕ್ಷ್ಮೀ ತಾಯಿ ಗೀತಾ ಯಲಿಗಾರ ದಾವಣೆಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣ ಕುಮಾರಪಟ್ಟಣಂ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ದಾವಣೆಗೆರೆ ರೈಲ್ವೆ ಪೊಲೀಸರು ಕುಮಾರಪಟ್ಟಣಂ ಠಾಣೆಗೆ ಪ್ರಕರಣ ವರ್ಗಾಯಿಸಿದ್ದು, ತನಿಖೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net