ರಾಣೆಬೆನ್ನೂರ: ಯುವತಿಯೊಬ್ಬಳಿಗೆ ಸಾಲ ಕೊಡಿಸುವ ನೆಪದಲ್ಲಿ ಪರಿಚಯವಾದ ಯುವಕ ಆಕೆಯನ್ನು ಪ್ರೀತಿಸಿ, ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಓಡಿಹೋದ ಘಟನೆ ಕುರಿತು ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಕುರಿತು ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಬಿಮ್ಲಾನಾಯ್ಕ ಗ್ರಾಮದ ಶಿವಾನಾಯಕ ಬಸವನಾಯ್ಕ ಹಾಗೂ ಈತನ ಸಹೋದರ ಕಾಶಿನಾಥ ಬಸವನಾಯ್ಕ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ಇಬ್ಬರ ವಿರುದ್ಧ ನೊಂದ ಯುವತಿ ದೂರು ದಾಖಲಿಸಿದ್ದಾಳೆ. ಶಿವಾನಾಯಕ ಖಾಸಗಿ ಫೈನಾನ್ಸ್‌ನಲ್ಲಿ ಸಾಲ ಕೊಡಿಸುವ ಸಮಯದಲ್ಲಿ ಪರಿಚಯವಾಗಿದ್ದಾನೆ. ಬಳಿಕ ನನ್ನನ್ನು ಪ್ರೀತಿಸಿ ಮದುವೆ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿದ್ದ. ಅಲ್ಲದೆ ಜೋಗಪಾಲ್ಸ್ ಸೇರಿ ಇತರಡೆ ಕರೆದುಕೊಂಡು ಓಡಾಡಿದ್ದಾನೆ.
ನಂತರ ಇಲ್ಲಿಯ ಕಮಲಾ ನಗರದಲ್ಲಿ ಬಾಡಿಗೆ ಮನೆ ಮಾಡಿಟ್ಟು ನಿರಂತರ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆದರೀಗ ಮದುವೆ ಮಾಡಿಕೊಳ್ಳಲು ನಿರಾಕರಿಸಿ ತನ್ನ ಊರಿಗೆ ಹೋಗಿದ್ದಾನೆ. ಆತನಿಗೆ ಫೋನ್ ಮಾಡಿದಾಗ ಅವರ ಅಣ್ಣ ಬಾಯಿಗೆ ಬಂದಂತೆ ಬೈದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾಳೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.