

ರಾಣೆಬೆನ್ನೂರ: ಇಲ್ಲಿನ ವಂದೇ ಮಾತರಂ ಸ್ವಯಂ ಸೇವಾ ಸಂಘದ ವತಿಯಿಂದ ನಗರದ ಮುನ್ಸಿಪಲ್ ಮೈದಾನದಲ್ಲಿ ಪ್ರತಿಷ್ಠಾಪಿಸಿದ್ದ ರಾಣೆಬೆನ್ನೂರ ಕಾ ರಾಜಾ ಗಣಪತಿಯ ಶೋಭಾಯಾತ್ರೆ ಭಾನುವಾರ ಅಪಾರ ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಮುನ್ಸಿಪಲ್ ಮೈದಾನದಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ನಂತರ ಇಲ್ಲಿಂದ ಹೊರಟ ಶೋಭಾಯಾತ್ರೆಯು ಹಳೇ ಪಿ.ಬಿ. ರಸ್ತೆ, ಸಾಲೇಶ್ವರ ದೇವಸ್ಥಾನ, ಸಿದ್ದೇಶ್ವರ ದೇವಸ್ಥಾನ, ಕುರುಬಗೇರಿ ಕ್ರಾಸ್, ದುರ್ಗಾ ಸರ್ಕಲ್, ಎಂ.ಜಿ. ರಸ್ತೆ, ಬಸ್ ನಿಲ್ದಾಣ ಮಾರ್ಗವಾಗಿ ಹರಿಹರ ರಸ್ತೆಯಲ್ಲಿ ಎನ್.ವಿ. ಹೊಟೇಲ್ವರೆಗೆ ಸಾಗಿತು.
ಅಲ್ಲಿಂದ ಮೂರ್ತಿಯನ್ನು ಹರಿಹರದ ತುಂಗಭದ್ರಾ ನದಿಗೆ ತೆಗೆದುಕೊಂಡು ಹೋಗಿ ವಿಸರ್ಜಿಸಲಾಯಿತು. ಕೇರಳದ ವಿಶೇಷ ಕಲಾ ತಂಡಗಳು, ಸ್ಥಳೀಯ ಡೊಳ್ಳು ಕುಣಿತ, ಸಮಾಳ, ಹಲಗೆಮೇಳ, ನಂದಿಕಂಬ, ಭಜನೆ ಜಾಂಜ್, ಅಣುಕು ಗೊಂಬೆಗಳು, ಹುಲಿ ಕುಣಿತ, ಪೂಜಾ ಕುಣಿತ, ಛಂಡಿ, ಮದ್ದಳೆ, ದೊಡ್ಡ ಹಲಗೆ, ಲೇಜಿಮ್ ಯಕ್ಷಗಾನ, ವೀರಗಾಸೆ ಹಾಗೂ ಡಿಜೆ ಸಂಗೀತ ಶೋಭಾಯಾತ್ರೆಯ ವಿಶೇಷ ಆಕರ್ಷಣೆಯಾಗಿದ್ದವು. ನವದುರ್ಗಿಯರು ಒಳಗೊಂಡ ಕಲಾಕೃತಿಗಳು ಎಲ್ಲರ ಗಮನ ಸೆಳೆದವು. ದಾರಿಯುದ್ದಕ್ಕೂ ಯುವ ಜನಾಂಗ ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದರು.
ವಂದೇ ಮಾತರಂ ಸ್ವಯಂ ಸಂಘದ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ ಸೇರಿ ಸಾವಿರಾರು ಜನ ಪಾಲ್ಗೊಂಡಿದ್ದರು.