ಟೊಮ್ಯಾಟೊ ದರ ಗಗನಮುಖಿ

RNR TOMATO
ಸಾಂದರ್ಭಿಕ ಚಿತ್ರ
Published on

ರಾಣೆಬೆನ್ನೂರ: ನಗರದ ಮಾರುಕಟ್ಟೆಯಲ್ಲಿ ಮಂಗಳವಾರ ಟೊಮ್ಯಾಟೊ ಬೆಲೆ ಕೆಜಿಗೆ ರೂ. 60 ಆಗಿದೆ. ಕಳೆದ ಮಾರ್ಚ್‌ನಲ್ಲಿ ಕೆಜಿಗೆ 3 ರೂ.ಗೆ ಇಳಿದಿತ್ತು. ಹೀಗಾಗಿ, ರೈತರು ಆಗ ಟೊಮ್ಯಾಟೊ ಫಸಲನ್ನು ಹೊಲದಲ್ಲಿಯೇ ಕೊಳೆಯಲು ಬಿಟ್ಟಿದ್ದರು.
ರೈತರ ಬಳಿಯಿಲ್ಲ ಬೆಳೆ: ತಾಲೂಕಿನಲ್ಲಿ ನೀರಾವರಿ ಕೃಷಿಯಡಿ ಕಳೆದ ಜನವರಿಯಲ್ಲಿ 500ಕ್ಕೂ ಅಧಿಕ ಹೆಕ್ಟೇರ್‌ನಲ್ಲಿ ಟೊಮ್ಯಾಟೊ ಬೆಳೆಯಲಾಗಿತ್ತು. ಆ ಬೆಳೆ ಮಾರ್ಚ್, ಏಪ್ರಿಲ್‌ನಲ್ಲಿ ರೈತರ ಕೈಗೆ ಬಂದಿತ್ತು. ಆಗ ಟೊಮ್ಯಾಟೊ ಬೆಲೆ ಪಾತಾಳಕ್ಕೆ ಕುಸಿದಿತ್ತು. ಹೀಗಾಗಿ, ರೈತರು ಬೆಳೆ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಿದರೆ, ಸಾಗಾಟದ ಖರ್ಚು ಸಹ ದೊರೆಯಲ್ಲ ಎಂದು ಜಮೀನಿನಲ್ಲಿಯೇ ಕೊಳೆಯಲು ಬಿಟ್ಟಿದ್ದರು. ಇನ್ನೂ ಕೆಲವರು ಟೊಮ್ಯಾಟೊ ಗಿಡಗಳನ್ನು ಕಿತ್ತು ಹಾಕಿದ್ದರು. ಆದರೀಗ ಮಾರುಕಟ್ಟೆಯಲ್ಲಿ ಉತ್ತಮ ದರವಿದೆ. ಆದರೆ, ಬೆಳೆ ಇಲ್ಲವಾಗಿದೆ.
ಕೋಲಾರದಿಂದ ಆವಕ: ಸದ್ಯ ಸ್ಥಳೀಯ ಟೊಮ್ಯಾಟೊ ಇಲ್ಲದ ಕಾರಣ ಕೋಲಾರದಿಂದ ತರಿಸಲಾಗುತ್ತಿದೆ. ನಿತ್ಯ ಮಾರುಕಟ್ಟೆಗೆ 250 ರಿಂದ 400 ಬಾಕ್ಸ್‌ಗಳು (ಒಂದು ಬಾಕ್ಸ್ 20 ಕೆಜಿ) ಬರುತ್ತಿವೆ. ದೂರದ ಊರಿನಿಂದ ತರಿಸುತ್ತಿರುವುದರಿಂದ ಬೆಲೆಯಲ್ಲಿ ಹೆಚ್ಚಳವಾಗಿದೆ ಎಂಬುದು ವ್ಯಾಪಾರಸ್ಥರ ಅಭಿಪ್ರಾಯ.
ಮರಗುತ್ತಿದ್ದಾನೆ ಬೆಳೆಗಾರ
ಕಳೆದ 2022ರ ಆಗಸ್ಟ್, ಅಕ್ಟೋಬರ್‌ನಲ್ಲಿ ಸುರಿದ ನಿರಂತರ ಮಳೆಯಿಂದ ಅತಿವೃಷ್ಟಿ ಉಂಟಾಗಿತ್ತು. ಬಳಿಕ ರೈತರು ಟೊಮ್ಯಾಟೊ ಬೆಳೆಯಲು ಮುಂದಾಗಿದ್ದರು. 1 ಎಕರೆಗೆ ಬೀಜ, ಗೊಬ್ಬರ, ಕೂಲಿ ಕಾರ್ಮಿಕರ ಸಂಬಳ ಸೇರಿ 30 ಸಾವಿರ ರೂ.ವರೆಗೂ ಖರ್ಚು ಮಾಡಿದ್ದರು. ಆದರೆ, ಬೆಳೆ ಮಾರಾಟಕ್ಕೆ ಬರುವಷ್ಟರಲ್ಲಿ ಬೆಲೆ ಕುಸಿಯಿತು. ಆದರೀಗ ಉತ್ತಮ ಬೆಲೆ ಬಂದಿದೆ. ಮಾರಾಟ ಮಾಡಲು ಬೆಳೆಯಿಲ್ಲ. ಹೀಗಾಗಿ, ಮಾರುಕಟ್ಟೆಯ ಈಗಿನ ಬೆಲೆ ಕಂಡು ರೈತರು ಮರಗುವಂತಾಗಿದೆ.

ಟೊಮ್ಯಾಟೊ ಬೆಳೆ ಸಂಪೂರ್ಣ ಕೈಗೆ ಬಂದಾಗ ಬೆಲೆ ಕುಸಿತ ಕಂಡಿದ್ದರಿಂದ ಸಂಪೂರ್ಣ ನಾಶ ಮಾಡಿದ್ದೇವೆ. ಆದರೀಗ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದೆ. ಆದರೆ, ಮಾರಾಟ ಮಾಡಲು ಟೊಮ್ಯಾಟೊ ಇಲ್ಲ. ಹಲ್ಲಿದ್ದಾಗ ಕಡಲೆ ಇರಲಿಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ ಎನ್ನುವಂತಾಗಿದೆ. ನಮ್ಮ ಬದುಕು.ರಮೇಶ ಟೊಮ್ಯಾಟೊ ಬೆಳೆದಿದ್ದ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net