ಜಲಾನಯನ ಪ್ರದೇಶದ ಅಭಿವೃದ್ಧಿಗೆ ನರೇಗಾ ಬಲ; ಸುಣಕಲ್‌ಬಿದರಿಯಲ್ಲಿ ಜಿಪಂ ಸಿಇಒ ಅಕ್ಷಯ ಶ್ರೀಧರ ಹೇಳಿಕೆ

7 HVR 2
Published on

ರಾಣೆಬೆನ್ನೂರ: ಜಲಾನಯನ ಪ್ರದೇಶದ ಅಭಿವೃದ್ಧಿಗೆ ನರೇಗಾ ಬಲ ತುಂಬಿದೆ ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಹೇಳಿದರು.
ತಾಲೂಕಿನ ಸುಣಕಲ್‌ಬಿದರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡದ ಹೊಸಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಜಲಾನಯನ ಪ್ರದೇಶಕ್ಕೆ ಇತ್ತೀಚೆಗೆ ಭೇಟಿ ನೀಡಿ ಅವರು ಮಾತನಾಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸಂಬಂಧಪಟ್ಟ ಕೃಷಿ, ಅರಣ್ಯ, ತೋಟಗಾರಿಕೆ ಹಾಗೂ ಸರ್ಕಾರೇತರ ಸ್ವಯಂಸೇವಾ ಸಂಸ್ಥೆಯ ಸಹಕಾರದೊಂದಿಗೆ ಜಲಾನಯನ ಪ್ರದೇಶವನ್ನು ಗುರುತಿಸಿ ಜಲಾನಯನ ಪ್ರದೇಶದ ಉಪಚಾರ ಇಂದಿನ ಅಗತ್ಯವಾಗಿದೆ. ನರೇಗಾ ಯೋಜನೆಯಡಿ ಸುಮಾರು 27 ಲಕ್ಷ ರೂ. ಅನುದಾನದ ಕ್ರಿಯಾಯೋಜನೆಗೆ ಅನುಮೋದನೆ ನೀಡಿ ಕೆಲಸವನ್ನು ಪ್ರಸಕ್ತ ವರ್ಷದಲ್ಲಿ ಮೇಲ್‌ಸ್ಥರದಲ್ಲಿ ಬರುವ ರೈತರ ಗುಂಪುಗಳನ್ನು ರಚನೆ ಮಾಡಿ ಕಾಮಗಾರಿ ಪ್ರಾರಂಭಿಸಬೇಕು ಎಂದು ಸೂಚಿಸಿದರು.
ಸರ್ಕಾರೇತರ ಸ್ವಯಂಸೇವಾ ಸಂಸ್ಥೆಯ ಎಸ್.ಡಿ.ಬಳಿಗಾರ ಮಾತನಾಡಿ, ಸುಮಾರು 153 ಎಕರೆ ಪ್ರದೇಶದಲ್ಲಿ ಮೇಲ್‌ಸ್ಥರದಲ್ಲಿರುವ ಪ್ರದೇಶದ ಪೈಕಿ ಈಗಾಗಲೇ 35 ಎಕರೆ ಪ್ರದೇಶದಲ್ಲಿ ಬದು ನಿರ್ಮಾಣ ಕೃಷಿಯ ಅರಣ್ಯ ಬದು ಬೇಸಾಯ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ. ಇದರಿಂದ 1,050 ಮಾನವ ದಿನಗಳು ಸೃಜನೆಯಾಗಿವೆ ಎಂದರು.
ತಾಪಂ ಇಒ ಸುಮಲತಾ ಎಸ್.ಪಿ., ಸಹಾಯಕ ನಿರ್ದೇಶಕ ಪರಶುರಾಮ ಪೂಜಾರ, ಕೃಷಿ ವಿಜ್ಞಾನಿಗಳಾದ ಗುರುಪ್ರಸಾದ ಜಿ.ಎಸ್., ಸಂತೋಷ ಎಚ್.ಎಂ., ಸಿದ್ದಗಂಗಮ್ಮ ಕೆ.ಆರ್., ಲಕ್ಷ್ಮೀ ಪಾಟೀಲ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net