

ರಾಣೆಬೆನ್ನೂರ: ಖಾಸಗಿ ಕಂಪನಿಯ ಅವಧಿ ಮುಗಿದ ಕುರಕುರೆ ಮಾಡುವ ಪದಾರ್ಥ ತಿಂದು 40ಕ್ಕೂ ಅಧಿಕ ಕುರಿಗಳು ಮೃತಪಟ್ಟು 20ಕ್ಕೂ ಅಧಿಕ ಕುರಿಗಳು ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಘಟನೆ ತಾಲೂಕಿನ ಮಾಗೋಡ ಗ್ರಾಮದ ಬಳಿ ಭಾನುವಾರ ಸಂಭವಿಸಿದೆ.
ಗ್ರಾಮದ ಸೋಮಪ್ಪ ಕುರವತ್ತಿ ಎಂಬುವರಿಗೆ ಸೇರಿದ ಕುರಿಗಳು ಮೃತಪಟ್ಟಿರುವುದು.
ಖಾಸಗಿ ಕಂಪನಿಗೆ ಸಂಬಂಧಿಸಿದ ಅವಧಿ ಮುಗಿದ ಕುರಕುರೆ ಮಾಡುವ ಪದಾರ್ಥಗಳನ್ನು ಯಾರೋ ವ್ಯಕ್ತಿಗಳು ಮಾಗೋಡ ಗ್ರಾಮದ ಬಳಿ ಎನ್‌ಎಚ್-48ರ ಸರ್ವೀಸ್ ರಸ್ತೆ ಬದಿ ಎಸೆದು ಹೋಗಿದ್ದರು. ಸೋಮಪ್ಪ ಅವರ ಕುರಿಗಳು ಆಹಾರ ಸೇವಿಸುವ ಸಮಯದಲ್ಲಿ ಅವಧಿ ಮುಗಿದ ಪದಾರ್ಥಗಳನ್ನು ತಿಂದಿವೆ. ಇದರಿಂದಾಗಿ 40ಕ್ಕೂ ಅಧಿಕ ಕುರಿಗಳು ಮೃತಪಟ್ಟಿದ್ದರೆ, 20ಕ್ಕೂ ಅಧಿಕ ಕುರಿಗಳು ಸಾವು ಬದುಕಿನ ನಡುವೆ ಹೋರಾಟ ನಡೆಸಿವೆ. ಘಟನಾ ಸ್ಥಳಕ್ಕೆ ಪಶು ಆಸ್ಪತ್ರೆ ವೈದ್ಯರು, ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮಸ್ಥರಿಂದ ಪ್ರತಿಭಟನೆ…
ಅವಧಿ ಮುಗಿದ ಪದಾರ್ಥ ತಿಂದು ಕುರಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಕೂಡಲೇ ರಸ್ತೆ ಬದಿ ಅವಧಿ ಮುಗಿದ ಪದಾರ್ಥ ಚೆಲ್ಲಿದ ಖಾಸಗಿ ಕಂಪನಿಯವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಕುರಿ ಮೃತಪಟ್ಟು ನಷ್ಟ ಅನುಭವಿಸಿದ ಕುರಿ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕುರಿ ಮಾಲೀಕರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ರಾಜ್ಯ ಕುರಿ ಸಾಕಾಣಿಕೆದಾರ ಸಂಘಗಳ ಮಹಾಮಂಡಳಿಯ ನಿರ್ದೇಶಕ ಜೆ. ಜಯಪ್ಪ ಮಾತನಾಡಿ, ರಸ್ತೆಯ ಮೇಲೆ ಅವಧಿ ಮುಗಿದಿರುವ ಪದಾರ್ಥ ಚೆಲ್ಲಿದವರ ವಿರುದ್ಧ ಕಾನೂನು ಕ್ರಮ ಕೈಗೊಂಡು ರಾಜ್ಯಾದ್ಯಂತ ಆ ಕಂಪನಿ ಬಂದ್ ಮಾಡಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಸ್ಥಳಕ್ಕೆ ಬಂದ ತಹಸೀಲ್ದಾರ್ ಗುರುಬಸವರಾಜ ಮಾತನಾಡಿ, ಕುರಿಗಳ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು. ಮೃತ ಕುರಿಗಳ ಮಾಲೀಕರಿಗೆ ಪರಿಹಾರ ನೀಡುವ ಕುರಿತು ಸ್ಥಳೀಯ ಶಾಸಕರ ಸಲಹೆ ಪಡೆದು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಕೊಡಿಸಲು ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ತಾಲೂಕು ಕುರುಬ ಸಂಘದ ಅಧ್ಯಕ್ಷ ಷಣ್ಮುಖಪ್ಪ ಕಂಬಳಿ, ಕಾರ್ಯದರ್ಶಿ ಮೃತ್ಯುಂಜಯ ಗುದಿಗೇರ, ಗ್ರಾಮಲೆಕ್ಕಾಧಿಕಾರಿ ಸಿ.ಎನ್ ಪೂಜಾರ, ಆನಂದ ಹುಲ್ಬನ್ನಿ, ಭರಮಪ್ಪ ಕಂಬಳಿ, ರಾಮಪ್ಪ, ಸಿದ್ದಪ್ಪ, ಹನುಮಂತಪ್ಪ ಕುರವತ್ತಿ, ಸುರೇಶ ಮಡಿವಾಳರ, ನೀಲಪ್ಪ ದೇವರಗುಡ್ಡ, ಲೋಕಪ್ಪ ಮತ್ತಿತರರಿದ್ದರು.