

ರಾಣೆಬೆನ್ನೂರ: ಗುಣಮಟ್ಟದ ಶಿಕ್ಷಣ ಒದಗಿಸುವ ಮೂಲಕ ರಾಷ್ಟ್ರದ ಭವಿಷ್ಯ ನಿರ್ಮಿಸಬಹುದು ಎಂದು ಸ್ವಾತಂತ್ರೃ ಹೋರಾಟಗಾರ ಕೆ.ಎಫ್. ಪಾಟೀಲ ಆಶಯ ಹೊಂದಿದ್ದರು. ಅವರ ಜೀವನಾಧಾರಿತ ಸಾಕ್ಷೃಚಿತ್ರ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎಂದು ಕೆ.ಎಫ್. ಪಾಟೀಲರ ಪುತ್ರಿ ಹಾಗೂ ಸಿನಿಮಾ ನಿರ್ದೇಶಕಿ ಅರುಣಾರಾಜೆ ಪಾಟೀಲ ಹೇಳಿದರು.
ತಾಲೂಕಿನ ಕಾಕೋಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಾಲಾ ಆಡಳಿತ ಮಂಡಳಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕೆ.ಎಫ್. ಪಾಟೀಲರು ಸ್ವಾತಂತ್ರ್ಯ ಹೋರಾಟಗಾರ ಆಗುವ ಮುನ್ನ ಶಿಕ್ಷಕರಾಗಿದ್ದರು. ಇದೇ ಕಾರಣಕ್ಕೆ ಶಿಕ್ಷಣದ ಮಹತ್ವ ಅರಿತಿದ್ದರು. ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಸ್ವಾತಂತ್ರೃ ನಂತರ ರಾಜಕಾರಣಿ ಆಗಿದ್ದರೂ ಅವರಲ್ಲಿದ್ದ ಸಮಾಜ ಸೇವಾ ಮನೋಭಾವ ಜಾಗೃತವಾಗಿತ್ತು. ಅಂಥ ಮಹನೀಯರ ಹೆಸರನ್ನು ಜೀವಂತವಾಗಿಟ್ಟ ಕಾಕೋಳ ಗ್ರಾಮಸ್ಥರ ಅಭಿಮಾನ ಮರೆಯಲಾರೆ ಎಂದರು.
ಸಾಕ್ಷೃಚಿತ್ರ ನಿರ್ದೇಶಕ ಗೂಳಪ್ಪ ಅರಳಿಕಟ್ಟಿ ಮಾತನಾಡಿ, ಅಖಂಡ ಧಾರವಾಡ ಜಿಲ್ಲೆಯ ದಕ್ಷಿಣ ಭಾಗದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ತುಂಬಿದ ಕೆ.ಎಫ್. ಪಾಟೀಲ ಜೀವನಾಧಾರಿತ ಕರ್ಮಯೋಗಿ ಕೆ.ಎಫ್. ಪಾಟೀಲ ಸಾಕ್ಷೃಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದಕ್ಕೆ ಪೂರಕವಾಗಿ ಸಿದ್ಧತೆ ನಡೆದಿದೆ. ಈ ಸಾಕ್ಷೃಚಿತ್ರ ನವಪೀಳಿಗೆಯನ್ನು ಆಕರ್ಷಿಸಲಿದೆ. ಜತೆಗೆ ಧೀಮಂತ ನಾಯಕತ್ವದ ಮುತ್ಸದ್ಧಿಯನ್ನು ಮತ್ತೊಮ್ಮೆ ಪರಿಚಯಿಸಲಿದೆ ಎಂದರು.