ರಾಣೆಬೆನ್ನೂರ- ಹರಿಹರ ಮಧ್ಯದ 22 ಕಿ.ಮೀ. ಪ್ರಯಾಣಕ್ಕೆ 49 ರೂಪಾಯಿ ಟಿಕೆಟ್ ದರ, ಪ್ರಯಾಣಿಕರ ಸ್ಥಿತಿ ಹರೋಹರ!

2-RNR-01
Published on


ವಿಜಯವಾಣಿ ವಿಶೇಷ ರಾಣೆಬೆನ್ನೂರ
ರಾಣೆಬೆನ್ನೂರ ನಗರದಿಂದ ಹರಿಹರ ಕೇವಲ 22 ಕಿ.ಮೀ. ದೂರದಲ್ಲಿದೆ. ಆದರೆ, ಇಲ್ಲಿಗೆ ಸಾರಿಗೆ ಸಂಸ್ಥೆಯ ಬಸ್ ಮೂಲಕ ತಲುಪಬೇಕಾದರೆ 49 ರೂ. ಟಿಕೆಟ್ ದರ ಕೊಡಬೇಕು. 22 ಕಿ.ಮೀ.ಗೆ ಇಷ್ಟೊಂದು ಹಣ ಎಂದು ಅಚ್ಚರಿ ಪಟ್ಟರೂ ಇದು ನಿಜ…!


ಹೌದು ರಾಣೆಬೆನ್ನೂರ ಬಸ್ ನಿಲ್ದಾಣದಿಂದ ಹರಿಹರಕ್ಕೆ ಸಾರಿಗೆ ಸಂಸ್ಥೆಯಿಂದ ತಡೆರಹಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಈ ಬಸ್​ಗೆ ಟಿಕೆಟ್ ದರ 49 ರೂ. ನಿಗದಿಪಡಿಸಿರುವುದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


ರಾಣೆಬೆನ್ನೂರ ನಗರದಿಂದ ಹಾವೇರಿ 36 ಕಿ.ಮೀ. ದೂರದಲ್ಲಿದೆ. ಇದರ ಪ್ರಯಾಣಕ್ಕೆ ತಡೆ ರಹಿತ ಬಸ್​ಗಳಿಗೆ 40 ರೂ. ಹಾಗೂ ಇತರ ಬಸ್​ಗಳಿಗೆ 36 ರೂ. ದರವಿದೆ. ಆದರೆ, ಇದಕ್ಕೂ ಹತ್ತಿರವಿರುವ ಹರಿಹರಕ್ಕೆ 49 ರೂ. ದರ ನಿಗದಿಪಡಿಸಿರುವುದು ಸರಿಯಲ್ಲ ಎಂಬುದು ಪ್ರಯಾಣಿಕರ ಅಳಲು.
ಟೋಲ್ ಹಣ ಪ್ರಯಾಣಿಕರಿಂದ ವಸೂಲಿ: ರಾಣೆಬೆನ್ನೂರ-ಹರಿಹರ ನಡುವೆ ರಾಷ್ಟ್ರೀಯ ಹೆದ್ದಾರಿ-48ರ ಚಳಗೇರಿ ಬಳಿ ಟೋಲ್ ಇದೆ. ಇಲ್ಲಿ ಸಾರಿಗೆ ಸಂಸ್ಥೆ ಬಸ್​ಗಳಿಗೆ ಒಂದು ಬಾರಿಗೆ 440 ರೂ. ಶುಲ್ಕವಿದೆ. ಎರಡೂ ಸೈಡ್ ಸೇರಿ 880 ರೂ. ಆಗುತ್ತದೆ. ಈ ಶುಲ್ಕವನ್ನು ಪ್ರಯಾಣಿಕರಿಂದ ಟಿಕೆಟ್ ಹಣದ ರೂಪದಲ್ಲಿ ವಸೂಲಿ ಮಾಡಲಾಗುತ್ತಿದೆ.


ಬಡವರಿಗೆ ಹೊರೆ: ರಾಣೆಬೆನ್ನೂರಿನಿಂದ ಹರಿಹರಕ್ಕೆ ನಿತ್ಯವೂ ಕೂಲಿ ಕಾರ್ವಿುಕರು, ಚಿಕ್ಕಪುಟ್ಟ ವ್ಯಾಪಾರ ಮಾಡುವವರು, ವಿದ್ಯಾರ್ಥಿಗಳು ಓಡಾಡುತ್ತಾರೆ. ಇವರಿಗೆ 22 ಕಿ.ಮೀ. ಪ್ರಯಾಣಕ್ಕೆ 49 ರೂ. ದರ ನೀಡುವುದು ಕಷ್ಟಕರವಾಗಿದೆ. ಬಸ್​ಗಿಂತ ಬೈಕ್​ನಲ್ಲಿ ಕಡಿಮೆ ಖರ್ಚಿನಲ್ಲಿ ಹೋಗಿ ಬರಬಹುದು. ಕಡಿಮೆ ಅಂತರದಲ್ಲಿರುವ ಹರಿಹರಕ್ಕೆ ಸಾರಿಗೆ ಸಂಸ್ಥೆಯವರು ಹೆಚ್ಚಿನ ದರ ನಿಗದಿ ಪಡಿಸಿರುವುದು ಸರಿಯಲ್ಲ. ಆದ್ದರಿಂದ ಟಿಕೆಟ್ ದರ ಕಡಿಮೆ ಮಾಡಬೇಕು ಎಂಬುದು ಪ್ರಯಾಣಿಕರ ಒತ್ತಾಯವಾಗಿದೆ.

ರಾಣೆಬೆನ್ನೂರಿನಿಂದ ದಾವಣಗೆರೆಗೆ 60 ರೂ. ಟಿಕೆಟ್ ದರವಿದೆ. ಆದರೆ, ಮಧ್ಯದಲ್ಲಿರುವ ಹರಿಹರಕ್ಕೆ 49 ರೂ. ದರ ನಿಗದಿ ಮಾಡಿರುವುದರಿಂದ ಪ್ರಯಾಣಿಕರಿಗೆ ಹೊರೆಯಾಗುತ್ತಿದೆ. ಸಾರಿಗೆ ಸಂಸ್ಥೆ ಅಧಿಕಾರಿಗಳು ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡಿದಂತಾಗುತ್ತದೆ. ಆದ್ದರಿಂದ ಮೇಲಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಪ್ರಯಾಣ ದರ ಇಳಿಸಬೇಕು.| ಪ್ರಶಾಂತ ದಾಸರ, ಪ್ರಯಾಣಿಕ, ರಾಣೆಬೆನ್ನೂರ

ರಾಣೆಬೆನ್ನೂರ-ಹರಿಹರ ನಡುವೆ ಚಳಗೇರಿ ಬಳಿ ಎನ್​ಎಚ್-48ರ ಟೋಲ್​ನಾಕಾ ಬರುತ್ತದೆ. ಇಲ್ಲಿ ಒಂದು ಬಾರಿ ತೆರಳಲು 440 ರೂ. ದರವಿದೆ. ಹೀಗಾಗಿ ಅನಿವಾರ್ಯವಾಗಿ ಬಸ್ ಪ್ರಯಾಣ ದರ 49 ರೂ. ನಿಗದಿಪಡಿಸಲಾಗಿದೆ.| ನವೀನಕುಮಾರ ಹೆಡಿಯಾಲ, ಸಹಾಯಕ ಲೆಕ್ಕಿಗ, ಸಾರಿಗೆ ಸಂಸ್ಥೆ ರಾಣೆಬೆನ್ನೂರ ಘಟಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net