ರಾಣೇಬೆನ್ನೂರು ಕಸದ ಸಮಸ್ಯೆ ಸರ್ಕಾರಕ್ಕೆ ಕಸಿವಿಸಿ|Ranebennur Garbage

k (9)
Published on

ಬೆಂಗಳೂರು: ರಾಣೇಬೆನ್ನೂರಿನ ಪಾರಂಪರಿಕ ಘನತ್ಯಾಜ್ಯ (ಲೆಗಸಿ ವೇಸ್ಟ್) ಟೆಂಡರ್ ದರ ಪರಿಷ್ಕರಣೆ(Ranebennur Legacy Waste Tender Price Revision)ಬಗ್ಗೆ ಪರಿಶೀಲಿಸುವುದಾಗಿ ಪೌರಾಡಳಿತ ಸಚಿವ ರಹೀಂ ಖಾನ್ ತಿಳಿಸಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ನ ಪ್ರಕಾಶ್ ಕೋಳಿವಾಡ ಅವರ ಪ್ರಶ್ನೆಗೆ ಉತ್ತರಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಪ್ರಕಾಶ್ ಕೋಳಿವಾಡ, 22 ವರ್ಷದಿಂದ ಘನ ತ್ಯಾಜ್ಯ ವಿಲೇವಾರಿ ಆಗಿಲ್ಲ. ಪಶ್ಚಿಮ ಘಟ್ಟದ ರೀತಿ ಬೆಳೆದು ನಿಂತಿರುವ ಕಸದ ರಾಶಿಯನ್ನು ವಿಲೇವಾರಿ ಮಾಡಿಕೊಡಿ ಎಂದು ಕೇಳಿದರು.

ಇದು ಒಂದೆರಡು ವರ್ಷದ ಸಮಸ್ಯೆಯಲ್ಲ. ಹಾಗೆಯೇ ನಾನೂ ಈ ಸಮಸ್ಯೆಯನ್ನು ಮೊದಲ ಬಾರಿ ಪ್ರಸ್ತಾಪಿಸುತ್ತಲೂ ಇಲ್ಲ. 22 ವರ್ಷದಿಂದ ನಗರದಲ್ಲಿ ಬಿದ್ದಿರುವ ಕಸದ ರಾಶಿ ವಿಲೇವಾರಿಯಾಗದೇ ಈಗ ಪರ್ವತದಂತೆ ಬೆಳೆದು ನಿಂತಿದೆ. ಹಸಿ ಮತ್ತು ಒಣಕಸ ಎರಡೂ ಇರುವ ಈ ರಾಶಿಯಿಂದಾಗಿ ಅಂತರ್ಜಲ ಕಲುಷಿತವಾಗುತ್ತಿದೆ. ಪರಿಣಾಮವಾಗಿ ರಾಣೆಬೆನ್ನೂರಿನ ಕುಡಿಯುವ ನೀರಿನಲ್ಲಿ ವಿಷಯುಕ್ತ ಅಂಶಗಳು ಸೇರಿಕೊಂಡು ಕ್ಯಾನ್ಸರ್ ಸಮಸ್ಯೆಗೆ ಜನ ಸಿಲುಕುವ ಆತಂಕದಲ್ಲಿದ್ದಾರೆ ಎಂದು ಗಮನ ಸೆಳೆದರು.

550 ರೂ. ನಿಗದಿ ಮಾಡಿದರೆ ಹೇಗೆ?

ಹಸಿ ಕಸವನ್ನು ಓಎನ್‌ಜಿಸಿ ಕಂಪನಿ ವಿಲೇವಾರಿ ಮಾಡಬೇಕು ಎಂಬುದು ಈಗಾಗಲೇ ಒಡಂಬಡಿಕೆಯಾಗಿತ್ತು. ಒಣ ಕಸವನ್ನು ವಿಲೇವಾರಿ ಮಾಡಲು ನಾಲ್ಕು ಬಾರಿ ಟೆಂಡರ್ ಕರೆದರೂ ಒಬ್ಬರೂ ಮುಂದೆ ಬರುತ್ತಿಲ್ಲ. ಇದಕ್ಕೆ ಕಾರಣ ಟನ್‌ಗೆ ಕೇವಲ 550 ರೂ. ದರ ನಿಗದಿ ಮಾಡಿರುವುದೇ ಆಗಿದೆ. ಕಡಿಮೆ ದರದ ಕಾರಣ ಟೆಂಡರ್ ಹಾಕಲು ಯಾರೂ ಮುಂದೆ ಬರುತ್ತಿಲ್ಲ. ಈ ದರ ಪರಿಷ್ಕರಿಸಬೇಕು ಎಂದು ಆಗ್ರಹಿಸಿದರು.

ಸಿಮೆಂಟ್ ಕಾರ್ಖಾನೆಗಳಿಗೆ ಅನುಮತಿ ನೀಡಿ

ಕಸದ ರಾಶಿಯಲ್ಲಿನ ಪ್ಲಾಸ್ಟಿಕ್ ಅನ್ನು ತೆಗೆದುಕೊಂಡು ಹೋಗಲು ರಾಜ್ಯದ ಸಿಮೆಂಟ್ ಕಾರ್ಖಾನೆಗಳಿಗೆ ಅನುಮತಿ ನೀಡುವ ಪ್ರಸ್ತಾವನೆ ಸರ್ಕಾರದ ಬಳಿ ಇದೆ. ರಾಣೆಬೆನ್ನೂರಿನ ಕಸಕ್ಕೆ ಅನ್ವಯವಾಗುವಂತೆ ಇದಕ್ಕಾದರೂ ಅವಕಾಶ ನೀಡಬೇಕು ಎಂದು ಕೋಳಿವಾಡ ಸರ್ಕಾರಕ್ಕೆ ಮನವಿ ಮಾಡಿದರು.

ಒಂದು ವಾರದಲ್ಲಿ ಪರಿಹಾರ ಕ್ರಮ

ಸಮಸ್ಯೆಯ ಗಂಭೀರತೆಯನ್ನು ಅರಿತ ಸ್ಪೀಕರ್ ಯು.ಟಿ. ಖಾದರ್ ರೂಲಿಂಗ್ ನೀಡಿ, ತಕ್ಷಣ ಈ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು.

ಅದಕ್ಕೆ ಪೌರಾಡಳಿತ ಸಚಿವ ರಹೀಂ ಖಾನ್, ಒಂದು ವಾರದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿ, ಟೆಂಡರ್ ದರ ಪರಿಷ್ಕರಿಸುವ ಬಗ್ಗೆಯೂ ಆಲೋಚಿಸಲಾಗುತ್ತದೆ. ಹಾಲಿ ಇರುವ ಟೆಂಡರ್ ದರ ಕೇಂದ್ರದ ಮಾರ್ಗಸೂಚಿಯಂತೆ ನಿಗದಿಯಾಗಿದೆ. ಆದಾಗ್ಯೂ ಸದಸ್ಯರು ಎತ್ತಿರುವ ವಿಷಯ ಗಂಭೀರ ಸ್ವರೂಪದ್ದಾಗಿರುವುದರಿಂದ ಇನ್ನೊಂದು ವಾರದಲ್ಲಿ ಈ ಕಸದ ಸಮಸ್ಯೆಗೆ ಪರಿಹಾರವನ್ನು ಒದಗಿಸಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net