

ರಾಣೆಬೆನ್ನೂರ: ಮನುಷ್ಯ ಸದಾ ಸುಖಾಪೇಕ್ಷಿ. ಸುಖದ ಮೂಲ ಧರ್ಮ ಪರಿಪಾಲನೆಯಲ್ಲಿದೆ. ಭರವಸೆ ಮನುಷ್ಯನನ್ನು ಬೆಳೆಸಿ ಬದುಕಿಸುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.
ನಗರದ ಶನೇಶ್ಚರ ಮಂದಿರದಲ್ಲಿ ಶನಿವಾರ ರಾತ್ರಿ ಏರ್ಪಡಿಸಿದ್ದ ಮನುಕುಲ ಸದ್ಭಾವನಾ ಧರ್ಮಸಭೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.
ಸುಂದರವಾಗಿ ಅಲಂಕಾರ ಮಾಡಿದ ಸುಳ್ಳಿಗಿಂತ ಹರಿದ ಬಟ್ಟೆಯ ಸತ್ಯವೇ ಹೆಚ್ಚು ಶಕ್ತಿಶಾಲಿ. ಕೈಗೆತ್ತಿಕೊಂಡ ಕೆಲಸವನ್ನು ಪೂರ್ಣ ಮನಸಿನಿಂದ ನೆರವೇರಿಸುವುದು ಬಹಳಷ್ಟು ಮುಖ್ಯ. ಬದುಕೆಂಬುದು ಕಷ್ಟ-ಸುಖ, ನೋವು-ನಲಿವುಗಳ ಸಮ್ಮಿಶ್ರಣ. ನಮ್ಮ ಜೀವನದ ದೋಣಿಗೆ ನಾವೇ ನಾಯಕರು. ಮನುಷ್ಯ ಬದುಕಿರುವಾಗಲೇ ಸಾಯುವ ಹಾಗೆ ಮಾಡುವ ಎರಡು ಬಲವಾದ ಕಾರಣಗಳಿವೆ. ಒಂದು ಅವಮಾನವಾದರೆ ಇನ್ನೊಂದು ಅನುಮಾನ. ಸಂಪತ್ತು ಹೆಚ್ಚಿದಂತೆ ಸೌಜನ್ಯ ಗುಣ ಬೆಳೆಯಬೇಕು. ಸಜ್ಜನ ಸತ್ಪುರುಷರ ಸಂಘದಿಂದ ಬೆಳೆದು ಬಂದಾಗ ಬದುಕು ಉಜ್ವಲಗೊಳ್ಳುತ್ತದೆ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಮಹಾಮುನಿ ಅಗಸ್ಱರಿಗೆ ಬೋಧ ಮಾಡುವಾಗ ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ನಿರೂಪಿಸಿದ್ದಾರೆ ಎಂದರು.
ಸಮಾರಂಭ ಉದ್ಘಾಟಿಸಿದ ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ಇಂದಿನ ವಿಜ್ಞಾನ, ತಂತ್ರಜ್ಞಾನ ಪ್ರಪಂಚದಲ್ಲಿ ಮನುಷ್ಯ ಶಾಂತಿ ನೆಮ್ಮದಿಯಿಂದ ಬದುಕುವುದು ಕಷ್ಟವಾಗುತ್ತಿದೆ. ಜನರು ಹಣದ ಬೆನ್ನು ಹತ್ತಿ ಸಂಸ್ಕೃತಿ ಮರೆಯುತ್ತಿದ್ದಾರೆ. ಆದರ್ಶಗಳನ್ನು ಮರೆತರೆ ಬದುಕಿಗೆ ಭವಿಷ್ಯವಿಲ್ಲ. ಇಂಥ ಸಮಾರಂಭಗಳು ಜನರಲ್ಲಿ ಶಾಂತಿ, ನೆಮ್ಮದಿ ಉಂಟು ಮಾಡುತ್ತವೆ ಎಂದರು.
ಮಂದಿರದ ವತಿಯಿಂದ ಪ್ರತಿ ವರ್ಷ ನೀಡುವ ಮನುಕುಲ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಯನ್ನು ದಾವಣಗೆರೆ ಉದ್ಯಮಿ ಪಿ. ಶಿವಕುಮಾರ ಹಾಗೂ ಚಿತ್ರನಟ ದೊಡ್ಡಣ್ಣ ಅವರಿಗೆ ರಂಭಾಪುರಿ ಜಗದ್ಗುರುಗಳು ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿದ ಚಿತ್ರನಟ ದೊಡ್ಡಣ್ಣ ಮಾತನಾಡಿ, ಈಶ್ವರನಿಗೆ ಐದು ಮುಖಗಳಿವೆ ಎನ್ನುವುದು ಸತ್ಯವಾಗಿದೆ. ಮೊದಲನೆಯ ಮುಖದಿಂದ ಹುಟ್ಟಿದ್ದು ರಂಭಾಪುರಿ ಸನ್ನಿಧಿಯಾಗಿದೆ. ಮಹಿಳೆಯರು ಗಂಗೆಯನ್ನು ಪೂಜಿಸಬೇಕು. ದುಷ್ಟರಿಂದ ದೂರವಿದ್ದು, ಧಾರ್ವಿುಕ ಮನೋಭಾವದಿಂದ ಸಂಸಾರಿಕ ಜೀವನ ನಡೆಸಬೇಕು. ಬದುಕಲು ಮಕ್ಕಳಿಗೆ ಯಾವುದೇ ಭಾಷೆ ಕಲಿಸಿ, ಆದರೆ ಕನ್ನಡ ಕಲಿಸಲು ಮರೆಯಬೇಡಿ ಎಂದರು.
ಹಿರೇಮಠದ ಶಿವಯೋಗಿ ಶಿವಾಚಾರ್ಯರು ಸ್ವಾಮೀಜಿ, ಬಂಕಾಪುರದ ರೇವಣಸಿದ್ಧೇಶ್ವರ ಶಿವಾಚಾರ್ಯರು, ನಾಗವಂದದ ಶಿವಾನಂದ ಸ್ವಾಮೀಜಿ, ನಿಚ್ಚವ್ವನಹಳ್ಳಿಯ ಶಿವಯೋಗಿ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಸಮಾರಂಭದ ನಂತರ ಶನೇಶ್ಚರ ಹಿರೇಮಠದಿಂದ ಕಾರ್ತಿಕ ದೀಪೋತ್ಸವ ಸಂಭ್ರಮದಿಂದ ಜರುಗಿತು.
ರವೀಂದ್ರಗೌಡ ಪಾಟೀಲ, ಚಂದ್ರಣ್ಣ ಬೇಡರ, ಬಸವರಾಜ ಮೈಲಾರ, ಪಿಎಸ್ಐ ಗಡ್ಡೆಪ್ಪ ಗುಂಜಟಗಿ, ಪುರೋಹಿತರು, ವೈದಿಕರು ಮತ್ತಿತರರು ಉಪಸ್ಥಿತರಿದ್ದರು.