ಬಿಜೆಪಿ ಚೊಂಬು ಪಾರ್ಟಿ ಎಂದು ವ್ಯಂಗ್ಯವಾಡಿದ ರಣದೀಪಸಿಂಗ್

new surjewala NEW
Published on

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಸರ್ಕಾರದ್ದು ದ್ವಂದ್ವ ನೀತಿಯ ಆಡಳಿತ. ಬಿಜೆಪಿ ಈಸ್ಟ್ ಇಂಡಿಯಾ ಕಂಪನಿ ಇದ್ದಂತೆ. ಒಡೆದು ಆಳುವ ನೀತಿ ಆ ಪಕ್ಷದ ಡಿಎನ್​ಎದಲ್ಲಿಯೇ ಇದೆ. ಬಿಜೆಪಿಯ ಕೇಂದ್ರ ನಾಯಕರು ಕರ್ನಾಟಕದ ಜನರನ್ನು ದ್ವೇಷಿಸುತ್ತಾರೆ. ಬಿಜೆಪಿ ಅಂದರೆ ಚೊಂಬು ಪಾರ್ಟಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ ವ್ಯಂಗ್ಯವಾಡಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಚೊಂಬುಗಳನ್ನು ಇಟ್ಟುಕೊಂಡೇ ಮಾತನಾಡಿದ ಅವರು,

ಬರಪರಿಹಾರ ಸೇರಿದಂತೆ ಕರ್ನಾಟಕಕ್ಕೆ ಯಾವುದೇ ರೀತಿಯ ಅನುದಾನ ನೀಡದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬರೀ ಚೊಂಬು ತೋರಿಸಿತು. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನರು ಬಿಜೆಪಿಗೆ ಚೊಂಬು ತೋರಿಸಲಿದ್ದಾರೆ ಎಂದು ಹೇಳಿದರು.

ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರು ಕರ್ನಾಟಕದ ಜನರ ವಿರುದ್ಧ ಸೇಡು ತೀರಿಸಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಕರ್ನಾಟಕಕ್ಕೆ ಯಾವುದೇ ರೀತಿಯ ಅನುದಾನ ಕೊಡುತ್ತಿಲ್ಲ ಎಂದು ದೂರಿದರು.

ಬರಗಾಲ ಪರಿಹಾರ ಹಣ ಕೊಡಿ, ನಾವೇನೂ ಭಿಕ್ಷೆ ಕೇಳುತ್ತಿಲ್ಲವೆಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದರೆ, ಕೇಂದ್ರ ಅನುದಾನ ನೀಡದೆ ಚೊಂಬು ತೋರಿಸಿತು. ಭದ್ರಾ ಡ್ಯಾಂಗೆ 6 ಸಾವಿರ ಕೋಟಿ ರೂ. ಕೊಡುವಂತೆ ಆಗ್ರಹಿಸಿದರೂ ಚೊಂಬು ತೋರಿಸಿದರು. ಮೇಕೆದಾಟು ಯೋಜನೆ, ಮಹದಾಯಿ ಯೋಜನೆ ಅನುಷ್ಠಾನಕ್ಕೂ ಕೇಂದ್ರ ಚೊಂಬು ತೋರಿಸುತ್ತಿದೆ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಳೆದ 10 ವರ್ಷಗಳಲ್ಲಿ ಯಾವುದೇ ಸಾಧನೆ ಮಾಡಲಿಲ್ಲ. ಈ ಹಿಂದೆ ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇದ್ದ ಬಿಜೆಪಿ ಸರ್ಕಾರವೂ 40 ಪರ್ಸೆಂಟ್ ಕಮೀಷನ್ ಪಡೆಯುವುದರಲ್ಲಿಯೇ ಕಾಲ ಕಳೆಯಿತು ಎಂದರು.

ಈ ಮಧ್ಯೆಯೂ ಕರ್ನಾಟಕ ಸರ್ಕಾರ ಜಾತಿ-ಧರ್ಮಗಳ ತಾರತಮ್ಯ ತೋರದೇ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಆದರೆ, ಕಾಂಗ್ರೆಸ್​ನ ಗ್ಯಾರಂಟಿ ಹೆಸರನ್ನು ಬಿಜೆಪಿ ನಕಲು ಮಾಡಿದೆ ಎಂದು ಟೀಕಿಸಿದರು.

ತಮ್ಮ ಸರ್ಕಾರ ಬಡವರ ಪರ ಎನ್ನುವ ಪ್ರಧಾನಿ ನರೇಂದ್ರ ಮೋದಿ, ಬೆಲಬಾಳುವ ಜಾಕೆಟ್ ಧರಿಸುತ್ತಾರೆ. ಕೋಟ್ಯಾಂತರ ರೂ. ಮೌಲ್ಯದ ಕಾರಿನಲ್ಲಿ ಓಡಾಡುತ್ತಾರೆ. ಬೆಲೆಬಾಳುವ ಪೆನ್ ಬಳಸುತ್ತಾರೆ. ಯಾವುದೇ ತಮ್ಮ ಆಡಳಿತದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡದೇ, ಜನರನ್ನು ಮೂರ್ಖರನ್ನಾಗಿಸಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಸಾಧನೆ ಹಾಗೂ ದೇಶದಲ್ಲಿ ಪ್ರಧಾನಿ ಮೋದಿ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಯಲಿ. ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ನಮ್ಮ ಸರ್ಕಾರದ ಸಚಿವರು ಬರುತ್ತಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮುಖಂಡರಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮತ್ತಿತರರಲು ಬರಲಿ. ಹುಬ್ಬಳ್ಳಿ, ಬೆಂಗಳೂರು, ಬೆಳಗಾವಿ, ಕಲಬುರ್ಗಿ ಯಾವುದೇ ಸ್ಥಳವಾದರೂ ಚರ್ಚೆಗೆ ಕಾಂಗ್ರೆಸ್ ಸಿದ್ಧ. ಪತ್ರಕರ್ತರು ಜಡ್ಜ್ ಆಗಿ ಈ ಸಂವಾದದಲ್ಲಿ ಕೆಲಸ ಮಾಡಲಿ ಎಂದರು.

ಸಚಿವರಾದ ಎಚ್.ಕೆ. ಪಾಟೀಲ, ಸಂತೋಷ ಲಾಡ್, ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ, ಸಲೀಂ ಅಹ್ಮದ್, ಧಾರವಾಡ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net